ಬಾಣಂತಿಯರ ಸಾವು ಪ್ರಕರಣ | ಉಭಯ ಸದನಗಳಲ್ಲಿ ಪ್ರತಿಧ್ವನಿ, ತನಿಖೆಗೆ ಒತ್ತಾಯ
ಬೆಳಗಾವಿ : ರಾಜ್ಯದ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ‘ಬಾಣಂತಿಯರ ಸಾವು ಪ್ರಕರಣ, ಕಳಪೆ ಮತ್ತು ಅವಧಿ ಮೀರಿದ ಔಷಧ ಪೂರೈಕೆ’ ವಿಚಾರ ವಿಧಾನ ಮಂಡಲ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು. ಅಲ್ಲದೆ, ಈ ಕುರಿತು ಸೂಕ್ತ ತನಿಖೆಗೆ ಆದೇಶಿಸಬೇಕೆಂಬ ಆಗ್ರಹವು ಕೇಳಿಬಂದಿದೆ.
ಮಂಗಳವಾರ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಆರ್.ಅಶೋಕ್, ‘ರಾಜ್ಯ ಸರಕಾರ ವೈದ್ಯಕೀಯ ಮಾಫಿಯಾದ ಕಪಿ ಮುಷ್ಠಿಯಲ್ಲಿದ್ದು, ಸರಕಾರಿ ಆಸ್ಪತ್ರೆಗಳಲ್ಲಿ ಕಳಪೆ ಮತ್ತು ಅವಧಿ ಮೀರಿದ ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಬಾಣಂತಿಯರು ಮತ್ತು ನವಜಾತ ಶಿಶುಗಳಿಗೆ ಜೀವದ ಗ್ಯಾರಂಟಿ ಇಲ್ಲದ ದುಸ್ಥಿತಿ ಎದುರಾಗಿದ್ದು, ಈ ಕುರಿತು ನಿಳುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಳ್ಳಾರಿ, ಬೆಳಗಾವಿ ಸೇರಿದಂತೆ ವಿವಿಧೆಡೆಗಳಲ್ಲಿ ಬಾಣಂತಿಯರ ಸಾವು ಸರಣಿಯಾಗಿ ಸಂಭವಿಸುತ್ತಿದ್ದು, ಬಾಣಂತಿಯರ ಸಾವಿಗೆ ನ್ಯಾಯ ಬೇಕಲ್ಲವೆ?. ಔಷಧಿ ಗುಣಮಟ್ಟ ಪರೀಕ್ಷಿಸುವ ವೈದ್ಯಕೀಯ ಸರಬರಾಜು ನಿಗಮದಲ್ಲಿನ ಕಾರ್ಯವಿಧಾನದ ಬಗ್ಗೆ ಪ್ರಶ್ನೆ ಮೂಡಿದೆ. ಬಡವರು, ಸಾರ್ವಜನಿಕರು ಉತ್ತಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆ ಅವಲಂಬಿಸುವ ಅನಿವಾರ್ಯತೆ ಇದೆ. ಬೆಂಗಳೂರಿನ ಜಯನಗರ ಕ್ಷೇತ್ರದಲ್ಲಿ ಕ್ಯಾನ್ಸರ್ ಪೀಡಿತ ರೋಗಿಗಳು ತಾವೇ ಔಷಧಿ ತೆಗೆದುಕೊಳ್ಳುವ, ಚುಚ್ಚುಮದ್ದು ತೆಗೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಈ ಬಗ್ಗೆ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಅಶೋಕ್ ಕೋರಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ, ‘ಆರೋಗ್ಯ ಸೇವೆಯನ್ನು ಸರಕಾರ ಸಂಪೂರ್ಣ ಕಡೆಗಣಿಸಿದೆ. ಜನರಿಗೆ ಆರೋಗ್ಯ ಗ್ಯಾರಂಟಿಯೂ ಬೇಕು ಎಂದು ಆಗ್ರಹಿಸಿದರು. ಬಿಜೆಪಿ ಇನ್ನಿತರ ಸದಸ್ಯರು ಇದಕ್ಕೆ ದನಿಗೂಡಿಸಿ ಮಾತನಾಡಿದರು. ಆ ಬಳಿಕ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ‘ಈ ವಿಷಯ ಗಂಭೀರವಾದದ್ದು, ನಿಲುವಳಿ ಸೂಚನೆ ಬದಲಾಗಿ ನಿಯಮ 69ರಡಿ ಅರ್ಧಗಂಟೆ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು. ಈಗ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಆರಂಭಿಸೋಣ ಎಂದು ಈ ವಿಚಾರದ ಚರ್ಚೆಗೆ ತೆರೆ ಎಳೆದರು.
ಸಿಎಂ ಜೊತೆ ಚರ್ಚಿಸಿ ತನಿಖೆಗೆ ತೀರ್ಮಾನ: ‘ಬಾಣಂತಿಯರ ಸಾವಿನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಅಥವಾ ನ್ಯಾಯಾಂಗ ತನಿಖೆ ಅಥವಾ ಜಂಟಿ ಸದನ ಸಮಿತಿ ಮೂಲಕ ತನಿಖೆ ನಡೆಸಬೇಕೇ ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್‍ನಲ್ಲಿ ಭರವಸೆ ನೀಡಿದ್ದಾರೆ.
ವಿಧಾನ ಪರಿಷತ್ ಕಲಾಪದಲ್ಲಿ ಬಾಣಂತಿಯರ ಸಾವಿನ ಬಗ್ಗೆ ನಡೆದ ಸುದೀರ್ಘ ಚರ್ಚೆಯ ನಂತರ ಉತ್ತರಿಸಿದ ಅವರು, ‘ಎಲ್ಲ ಧಿಕ್ಕಿನಲ್ಲಿಯೂ ತನಿಖೆ ನಡೆಸಲು ಸರಕಾರ ಬದ್ಧವಾಗಿದೆ, ಯಾವ ರೀತಿಯಲ್ಲಿಯೂ ಮುಚ್ಚಿ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವಿದೇಶಕ್ಕೆ ಪೂರೈಕೆಯಾಗುವ ಔಷಧಿಗಳ ಗುಣಮಟ್ಟ ಒಂದಾದರೆ, ಸ್ಥಳೀಯವಾಗಿ ಪೂರೈಕೆಯಾಗುವ ಔಷಧಿಗಳ ಗುಣಮಟ್ಟ ಇನ್ನೊಂದಾಗಿದೆ, ಇದು ಈ ರೀತಿ ಆಗಬಾರದು, ಗುಣಮಟ್ಟದಲ್ಲಿ ಯಾವ ರಾಜಿಯೂ ಇರಬಾರದು, ಬಾಣಂತಿಯರ ಸಾವಿನ ಪ್ರಕರಣಗಳು ಒಂದು ರೀತಿ ವ್ಯವಸ್ಥೆಯ ವೈಫಲ್ಯವೇ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆರ್.ಎಲ್. ದ್ರಾವಣ ಪೂರೈಸಿದ ಪಶ್ಚಿಮ್ ಬಂಗಾ ಫಾರ್ಮಾಸ್ಯೂಟಿಕಲ್ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅವರಿಗೆ ಪತ್ರ ಬರೆಯಾಗಿದೆ. ಇದು ಒಂದು ರೀತಿ ಕ್ಷಮಾಪಣೆ ಇಲ್ಲದ ಅಪರಾಧ. ಈ ಕಂಪೆನಿ ಮೇಲೆ ಕ್ರಮವಲ್ಲ ಕಂಪೆನಿಯೇ ಸಂಪೂರ್ಣ ಬಂದ್ ಆಗಬೇಕು ಎಂಬುದು ನನ್ನ ಭಾವನೆ. ಸಂತ್ರಸ್ತ ಕುಟುಂಬಗಳಿಗೆ ಜೀವವನ್ನು ಮರಳಿ ತರಲು ಸಾಧ್ಯವಿಲ್ಲ, ಆದರೆ, ಪರಿಹಾರ ರೂಪವಾಗಿ ಐದು ಲಕ್ಷ ರೂ.ಗಳನ್ನು ನೀಡಲು ಸರಕಾರ ನಿರ್ಧರಿಸಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಾಣಂತಿಯರ ಸಾವಿಗೆ ಮಿಡಿದ ಮೇಲ್ಮನೆ: ‘ಬಾಣಂತಿಯರ ಸಾವಿನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‌ಐಡಿ) ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ಕೂಗು ಪರಿಷತ್‍ನಲ್ಲಿ ಬಿಜೆಪಿ ಸದಸ್ಯರಿಂದ ಮೊಳಗಿತು. ಬಾಣಂತಿಯರ ಸಾವಿನ ವಿಷಯವಾಗಿ ಮೇಲ್ಮನೆ ಸದಸ್ಯರು ಮಾನವೀಯತೆಯ ನೆಲೆಗಟ್ಟಿನಲ್ಲಿ ವಿಷಯ ಪ್ರಸ್ತಾಪಿಸಿದರು. ಸಾವಿಗೆ ಒಂದಿಷ್ಟು ಪರಿಹಾರ ನೀಡಿದರೆ, ಜೀವ ಮರಳಿ ಬರುವುದಿಲ್ಲ, ಅನಾಥವಾದ ಮಕ್ಕಳ ಭವಿಷ್ಯದ ಪ್ರಶ್ನೆಯೇನು? ಸರಕಾರ ನೀಡುವ ಪರಿಹಾರ ಹಣ ಸಾಕಾಗುವುದಿಲ್ಲ, ಆ ಪರಿಹಾರ ಮೊತ್ತವನ್ನು ಹೆಚ್ಚಿಸಿ’ ಎಂಬ ವಿಚಾರವನ್ನು ಉಮಾಶ್ರೀ, ಐವಾನ್ ಡಿಸೋಜಾ, ಭಾರತಿ ಶೆಟ್ಟಿ, ಎನ್.ರವಿಕುಮಾರ್, ಸಿ.ಟಿ.ರವಿ, ಭೋಜೆಗೌಡ, ತಿಪ್ಪೇಸ್ವಾಮಿ ಸೇರಿದಂತೆ ಅನೇಕರು ವ್ಯಕ್ತಪಡಿಸಿದರು.
ತನಿಖೆಗೆ ಪ್ರತಿಪಕ್ಷ ಪಟ್ಟು: ಬಾಣಂತಿಯರ ಸಾವಿನ ಘಟನೆಗಳು ಮರುಕಳಿಸದಂತೆ ಇನ್ನುಳಿದ ಔಷಧಿಗಳನ್ನು ಪೂರೈಸುತ್ತಿರುವ ಕಂಪೆನಿಗಳ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿ ಹಾಗೂ ಬೆಂಗಳೂರನ್ನು ಕೇಂದ್ರಿಕರಿಸಿ ಔಷಧಿ ಪೂರೈಸುವ ಬದಲು ಆಯಾ ಜಿಲ್ಲಾ ಕೇಂದ್ರದಲ್ಲಿಯೇ ಔಷಧಿ ಪೂರೈಕೆಯಾಗುವ ವ್ಯವಸ್ಥೆ ರೂಪಿಸಿ’ ಎಂಬ ಸಲಹೆಯನ್ನು ಬಿಜೆಪಿ ಸದಸ್ಯ ಎನ್.ರವಿಕುಮಾರ್ ನೀಡಿ, ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರೆ, ಇನ್ನೋರ್ವ ಬಿಜೆಪಿ ಸದಸ್ಯ ಕೇಶವ ಪ್ರಸಾದ್, ಈ ಪ್ರಕರಣವನ್ನು ಜಂಟಿ ಸದನ ಸಮಿತಿ ರಚಿಸಿ ಆ ಮೂಲಕ ತನಿಖೆ ನಡೆಸಿ ಎಂಬ ಸಲಹೆ ನೀಡಿದರು.
ಸರಕಾರಕ್ಕೆ ಚಾಟಿ: ಕಪ್ಪುಪಟ್ಟಿಗೆ ಸೇರ್ಪಡೆಯಾಗಿದ್ದರೂ ಸಹ ಔಷಧಿ ಪೂರೈಕೆಗೆ ಸರಕಾರ ಏಕೆ ಅವಕಾಶ ನೀಡಿತು, ನ್ಯಾಯಾಲಯ ಔಷಧ ಕಂಪೆನಿಗೆ ವಿಧಿಸಿದ್ದ ಕಪ್ಪುಪಟ್ಟಿಗೆ ಸಂಬಂಧಿಸಿದಂತೆ ಮಾತ್ರ ತಡೆಯಾಜ್ಞೆ ನೀಡಿತ್ತು ಹೊರತು ಪೂರೈಕೆಯ ಯಾವ ವಿಷಯವನ್ನೂ ಹೇಳಿರಲಿಲ್ಲ, ಈ ವಿಷಯದಲ್ಲಿ ಸರಕಾರ ಜವಾಬ್ದಾರಿ ಮರೆತಿದೆ, ಸಚಿವರು ನೇರವಾಗಿ ತಪ್ಪು ಮಾಡದೇ ಹೋದರೂ ಇಲಾಖೆಯ ಕಸ್ಟೋಡಿಯನ್ ಅವರೇ ಆಗಿದ್ದಾರೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ಸದಸ್ಯ ಸಿ.ಟಿ.ರವಿ ಸರಕಾರಕ್ಕೆ ಚಾಟಿ ಬೀಸಿದರು.