ಬೆಳಗಾವಿ ಅಧಿವೇಶನ: ಬಿಜೆಪಿ-ಜೆಡಿಎಸ್ ಒಗ್ಗಟ್ಟಿನ ಹೋರಾಟಕ್ಕೆ ತೀರ್ಮಾನ

Update: 2023-12-01 13:41 GMT

ಬೆಂಗಳೂರು: ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಡಿ.4ರಿಂದ ಆರಂಭವಾಗಲಿರುವ ವಿಧಾನ ಮಂಡಲ ಚಳಿಗಾಲದ ಅಧಿವೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರಕಾರದ ವಿರುದ್ಧ ಜಂಟಿ ಹೋರಾಟ ನಡೆಸಲು ಮಿತ್ರಪಕ್ಷಗಳಾದ ಬಿಜೆಪಿ-ಜೆಡಿಎಸ್ ತೀರ್ಮಾನಿಸಿವೆ.

ಶುಕ್ರವಾರ ನಗರದಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಭೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಮುಖಂಡು ಸಮಾಲೋಚನೆ ನಡೆಸಿದರು.

ರಾಜ್ಯ ಸರಕಾರದ ಗ್ಯಾರೆಂಟಿ ಅನುಷ್ಠಾನದಲ್ಲಿನ ವೈಫಲ್ಯ, ಬರ ಪರಿಹಾರ ವಿತರಣೆ ವಿಳಂಬ, ವರ್ಗಾವಣೆ ದಂಧೆ ಸೇರಿದಂತೆ ಜನವಿರೋಧಿ ನೀತಿಗಳನ್ನು ಖಂಡಿಸಿ ಎರಡೂ ಪಕ್ಷಗಳು ಸದನದಲ್ಲಿ ಒಗ್ಗಟ್ಟಿನ ಹೋರಾಟ ನಡೆಸಲು ಚರ್ಚಿಸಿದ್ದು, ಕಲಾಪ ಆರಂಭದಿಂದಲೇ ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಉಭಯ ಪಕ್ಷಗಳ ನಾಯಕರು ಮಾತುಕತೆ ನಡೆಸಿದ್ದಾರೆ.

‘ಸ್ಪೀಕರ್ ಯು.ಟಿ ಖಾದರ್ ಅವರಿಗೆ ಬಿಜೆಪಿ ಶಾಸಕರು ಕೈ ಮುಗಿದು ಗೌರವ ನೀಡುವಂತೆ ಮಾಡಿದ್ದೇವೆ’ ಎಂಬ ಸಚಿವ ಝಮೀರ್ ಅಹಮದ್ ಖಾನ್ ನೀಡಿದ್ದ ಹೇಳಿಕೆಯನ್ನು ಸದನದಲ್ಲಿ ಪ್ರಸ್ತಾಪಿಸಿ, ಕ್ಷಮೆಯಾಚನೆಗೆ ಪಟ್ಟುಹಿಡಿಯುವ ನಿರ್ಧಾರ ಮಾಡಲಾಯಿತು ಎಂದು ಗೊತ್ತಾಗಿದೆ. ಕಲಾಪದಲ್ಲಿ ವಿಷಯಗಳ ಮೇಲಿನ ಚರ್ಚೆಯ ವೇಳೆ ಪರಸ್ಪರ ಸಹಕಾರ ಕೊಟ್ಟು ಸರಕಾರದ ವಿರುದ್ಧ ನಿಲ್ಲಬೇಕು ಎನ್ನುವ ನಿರ್ಧಾರಕ್ಕೆ ಬರಲಾಯಿತು.

ಸಭೆಯ ನಂತರ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ‘ವಿಧಾನಸಭೆಯ ಚಳಿಗಾಲದ ಅಧಿವೇಶದಲ್ಲಿ ಹೋರಾಟ ನಡೆಸುವ ಸಂಬಂಧ ಬಿಜೆಪಿ-ಜೆಡಿಎಸ್ ಮುಖಂಡರು ಸಭೆ ಸೇರಿ ಮಾತನಾಡಿದ್ದೇವೆ. ಯಾವ ರೀತಿಯ ಹೋರಾಟ ಮಾಡಬೇಕೆಂಬ ಬಗ್ಗೆ ಮುಂದೆ ಹೇಳುತ್ತೇವೆ’ ಎಂದು ಸ್ಪಷ್ಟಣೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News