ಬೆಳಗಾವಿ ಅಧಿವೇಶನ | ವಸತಿ, ಆಹಾರ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಲು ಸ್ಪೀಕರ್ ಖಾದರ್ ಸೂಚನೆ
ಬೆಳಗಾವಿ, ನ. 7: ಪ್ರತಿ ವರ್ಷದಂತೆ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವ ಸಚಿವರು, ಶಾಸಕರು, ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಎಲ್ಲರಿಗೂ ಸೂಕ್ತ ವಸತಿ, ಗುಣಮಟ್ಟದ ಆಹಾರ ಹಾಗೂ ಸಾರಿಗೆ ಸೌಕರ್ಯಗಳನ್ನು ಒದಗಿಸಬೇಕು ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ವಿಧಾನ ಮಂಡಲದ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಮತ್ತು ವಿವಿಧ ಸಮಿತಿಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಧಾನ ಮಂಡಲದ ಕಲಾಪಗಳನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ಅಧಿವೇಶನ ಸಂದರ್ಭದಲ್ಲಿ ಯಾವುದೇ ರೀತಿಯ ಅವ್ಯವಸ್ಥೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಏನೇ ಸಮಸ್ಯೆಗಳಿದ್ದರೆ ಅಥವಾ ಹೆಚ್ಚಿನ ಅನುಕೂಲತೆ ಬೇಕಾದರೆ ತಮ್ಮ ಅಥವಾ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅವರು ತಿಳಿಸಿದರು.
ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಗಳು ತಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕು. ಮದುವೆ ಸಮಾರಂಭಗಳು ಅದೆ ಸಮಯದಲ್ಲಿ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ಕೆಲವು ನಿರ್ದಿಷ್ಟ ಹೊಟೇಲ್ ಗಳಲ್ಲಿ ಸಾರ್ವಜನಿಕರಿಗೆ ಶೇ.10ರಷ್ಟು ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಮುಂಚಿತವಾಗಿ ಹೊಟೇಲ್ ಮಾಲಕರು ಹಾಗೂ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಬೇಕು ಎಂದು ಯು.ಟಿ.ಖಾದರ್ ತಿಳಿಸಿದರು.
ವಸತಿ, ಊಟೋಪಹಾರ ಮತ್ತು ಸಾರಿಗೆ ವ್ಯವಸ್ಥೆಯನ್ನು ಕಳೆದ ಬಾರಿಯಂತೆಯೇ ಮುಂದುವರಿಸಬೇಕು. ಕೆಲವು ಹೊಸ ಹೊಸ ಬೇಡಿಕೆಗಳಿರಬಹುದು. ಆದರೆ ಪ್ರತಿವರ್ಷದ ಪದ್ಧತಿಯನ್ನು ಪಾಲಿಸಬೇಕು. ಮುದ್ರಣ, ಲೇಖನ ಸಾಮಗ್ರಿಗಳನ್ನು ಅಗತ್ಯತೆ ಆಧರಿಸಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಲಭ್ಯವಾಗಿಟ್ಟುಕೊಳ್ಳಬೇಕು. ಸುವರ್ಣ ವಿಧಾನಸೌಧ, ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ತಂಗುವ ಹೊಟೇಲ್‍ಗಳ ಬಳಿ ತುರ್ತು ವೈದ್ಯಕೀಯ ಸೌಲಭ್ಯ ಒದಗಿಸಲು ತಂಡಗಳನ್ನು ನಿಯೋಜಿಸಬೇಕು ಎಂದು ಅವರು ಹೇಳಿದರು.
ಸಂಪೂರ್ಣ ವಿಧಾನಸೌಧ ಕಾಣಿಸುವಂತಹ ಸೆಲ್ಫಿ ಸ್ಪಾಟ್ ನಿಗದಿಪಡಿಸಬೇಕು. ಅಧಿವೇಶನ ಕಲಾಪ ವೀಕ್ಷಣೆಗೆ ಆಗಮಿಸುವ ಜನರಿಗೆ ಇದೊಂದು ಸ್ಮರಣೀಯ ಅವಕಾಶವಾಗಬೇಕು ಎಂದು ಯು.ಟಿ.ಖಾದರ್ ಹೇಳಿದರು.
ಅಧಿವೇಶನ ಸಂದರ್ಭದಲ್ಲಿ ವಿಧಾನಸೌಧದ ಹೊರಗಡೆ ಆವರಣದಲ್ಲಿ ಚಾಲಕರು, ಇತರೆ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಬೇಕು. ಸಾಧ್ಯವಾದರೆ ಕೂಪನ್ ನೀಡಬಹುದು. ಕಲಾಪ ವೀಕ್ಷಣೆಗೆ ಆಗಮಿಸುವ ಶಾಲಾ ಮಕ್ಕಳ ಬಸ್ ಗಳಿಗೆ ವಿಧಾನಸೌಧದ ಒಳಗಡೆಯ ಮುಖ್ಯದ್ವಾರದವರೆಗೆ ಅವಕಾಶ ಕಲ್ಪಿಸಬೇಕು ಎಂದು ಪೆÇಲೀಸ್ ಇಲಾಖೆಯ ಆಯುಕ್ತರಿಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುಂದರ ಉದ್ಯಾನ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಮತ್ತು ಲೋಕೋಪಯೋಗಿ ಇಲಾಖೆಯವರು ಪರಿಶೀಲನೆ ನಡೆಸಿ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಈಗಾಗಲೆ ಅನುಮೋದನೆಯಾಗಿರುವ ಉದ್ಯಾನ ಕಾಮಗಾರಿಯನ್ನು ತಕ್ಷಣವೆ ಆರಂಭಿಸಬೇಕು. ಈ ಬಗ್ಗೆ ಒಂದು ವಾರದೊಳಗೆ ವರದಿ ನೀಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಅಧಿವೇಶನದ ಒಟ್ಟಾರೆ ಪೂರ್ವಸಿದ್ಧತೆ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ವಸತಿ, ಊಟೋಪಹಾರ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಲಾಗಿದ್ದು, ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಳೆದ ವರ್ಷ ಖಾಸಗಿ ವಾಹನಗಳನ್ನು ಪಡೆಯದೆ ಸರಕಾರಿ ವ್ಯವಸ್ಥೆ ಬಳಸಿಕೊಂಡು ಕಾರ್ಯನಿರ್ವಹಿಸಲಾಗಿದೆ. ಕಳೆದ ಬಾರಿಯಂತೆ ಶಾಸಕರ ಆಪ್ತ ಸಹಾಯಕರು, ಗನ್ ಮ್ಯಾನ್ ಮತ್ತಿತರರಿಗೆ ಪಾವತಿ ಆಧಾರದ ಮೇಲೆ ಕೆಲವೊಂದು ಹೊಟೇೀಲ್ ಗಳನ್ನು ನಿಗದಿಪಡಿಸಲಾಗಿತ್ತು. ಈ ಬಾರಿಯೂ ಅದೇ ರೀತಿ ಮಾಡಲಾಗುವುದು ಎಂದು ಅವರು ಹೇಳಿದರು.
ಅಧಿವೇಶನದ ವಸತಿ ಹಂಚಿಕೆ, ಅಧಿಕಾರಿಗಳ ವಿವರ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಒಳಗೊಂಡ ಕ್ಯೂಆರ್ ಕೋಡ್ ಪುಸ್ತಿಕೆಯ ಸಾಫ್ಟ್ ಪ್ರತಿಯನ್ನು ಪ್ರತಿಯೊಬ್ಬರಿಗೂ ವಿತರಿಸಲಾಗುವುದು. ಇದಲ್ಲದೆ ಕ್ಯೂಆರ್ ಕೋಡ್ ಅನ್ನು ಸುವರ್ಣ ವಿಧಾನಸೌಧದ ಮೂಲೆ ಮೂಲೆಗಳಲ್ಲಿ ಪ್ರದರ್ಶಿಸಲಾಗುವುದು. ವಸತಿಗೃಹಗಳು ಸೇರಿದಂತೆ ಪ್ರತಿಯೊಂದು ಕಡೆಗಳಲ್ಲಿ ವೈದ್ಯಕೀಯ ತಂಡಗಳನ್ನು ಮತ್ತು ಆಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪೊಲೀಸ್ ಆಯುಕ್ತ ಎಸ್.ಎನ್.ಸಿದ್ದರಾಮಪ್ಪ ಮಾತನಾಡಿ, ಪೊಲೀಸ್ ವಸತಿಗೆ ವಿಶೇಷ ತಾತ್ಕಾಲಿಕ ಟೌನ್ ಷಿಪ್ ನಿರ್ಮಿಸಿ ಕೊಡಲಾಗುತ್ತಿದೆ. ಒಟ್ಟು 22 ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದ್ದು, ಜಿಲ್ಲಾಡಳಿತದ ಸಮನ್ವಯದೊಂದಿಗೆ ಸಮರ್ಪಕ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮಿ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಮತ್ತಿತರರು ಉಪಸ್ಥಿತರಿದ್ದರು.