ನ.14ಕ್ಕೆ ಗ್ರಾ.ಪಂ.ಗಳಲ್ಲಿ ‘ಮಕ್ಕಳ ಪಂಚಾಯತ್’ ಅರಿವಿನ ಹಬ್ಬ ಆಯೋಜನೆ

Update: 2024-11-12 15:19 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನ.14ರಂದು ಮಕ್ಕಳ ದಿನಾಚರಣೆ ಹಾಗೂ ನ.20ರಂದು ಅಂತರ್‍ರಾಷ್ಟ್ರೀಯ ಮಕ್ಕಳ ದಿನಾಚರಣೆ ಅಂಗವಾಗಿ ಹಲವು ಚಟುವಟಿಕೆಗಳನ್ನು ಕೈಗೊಳ್ಳಲು ನಿರ್ದೇಶನಗಳನ್ನು ನೀಡಲಾಗಿದೆ.

ನ.14ರಂದು ವಿಕೇಂದ್ರೀಕೃತ ವ್ಯವಸ್ಥೆಯ ಸ್ಥಳೀಯ ಸ್ವಯಂ ಆಡಳಿತ ಘಟಕವಾದ ಗ್ರಾಮ ಪಂಚಾಯತಿಗೆ 9 ಮತ್ತು 10ನೇ ತರಗತಿಯ 25 ವಿದ್ಯಾರ್ಥಿಗಳು ಒಬ್ಬ ಶಿಕ್ಷಕರೊಂದಿಗೆ ಪ್ರವಾಸ ಕೈಗೊಂಡು ಅಧ್ಯಯಿಸಲು ಅವಕಾಶ ಕಲ್ಪಿಸಿ ‘ಮಕ್ಕಳ ಪಂಚಾಯತ್‘ ಅರಿವಿನ ಹಬ್ಬವನ್ನು ಆಯೋಜಿಸಲು ಉದ್ದೇಶಿಸಲಾಗಿದೆ.

‘ಮಕ್ಕಳ ಪಂಚಾಯತ್’ ರೂಪುರೇಷೆಗಳು: ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಂದ ಗ್ರಾಮ ಪಂಚಾಯತಿಯ ಪ್ರದೇಶದಲ್ಲಿ ಮಕ್ಕಳೊಂದಿಗೆ ಒಂದು ಸಣ್ಣ ನಡಿಗೆ ಕೈಗೊಂಡು ಗ್ರಾಮ ಪಂಚಾಯತಿ ಒದಗಿಸುತ್ತಿರುವ ಸೇವೆಗಳ ಬಗ್ಗೆ ವಿವರಿಸಲಾಗುವುದು.

ಮಕ್ಕಳಿಗೆ ಪ್ರಜಾಪ್ರಭುತ್ವ, 73ನೇ ಸಂವಿಧಾನ ತಿದ್ದುಪಡಿ, 3 ಹಂತದ ವಿಕೇಂದ್ರೀಕೃತ ವ್ಯವಸ್ಥೆ ಮತ್ತು ಸ್ಥಳೀಯ ಸ್ವಯಂ ಆಡಳಿತ ಘಟಕವಾಗಿ ಗ್ರಾಮ ಪಂಚಾಯತಿಯ ಕಾರ್ಯನಿರ್ವಹಣೆ ವಿವರಿಸಲಾಗುವುದು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನ ಮಾಡಲಾಗುತ್ತಿರುವ ಯೋಜನೆಗಳ ಬಗ್ಗೆ ಸ್ಥೂಲ ಪರಿಚಯ ಮಾಡಿಸಲಾಗುವುದು.

ಮಹತ್ವಾಕಾಂಕ್ಷಿ ಯೋಜನೆಗಳಾದ ಅರಿವು ಕೇಂದ್ರ, ಕೂಸಿನ ಮನೆ, ಸ್ವ ಸಹಾಯ ಸಂಘಗಳಿಂದ ಘನ ತ್ಯಾಜ್ಯ ನಿರ್ವಹಣೆ ಮತ್ತು ಗ್ರಾಮ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಗುವುದು. ಮಕ್ಕಳಿಗೆ ಲಘು ಉಪಾಹಾರವನ್ನು ನೀಡಲಾಗುವುದು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ‘ಮಕ್ಕಳ ಪಂಚಾಯತ್’ ಅರಿವಿನ ಹಬ್ಬವನ್ನು ಯಶಸ್ವಿಯಾಗಿ ಆಯೋಜಿಸಲು ಆಯಾ ಜಿಲ್ಲೆಗಳ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ತಿಳಿಸಲಾಗಿದೆ.

ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ನಿರ್ದೇಶನಗಳಂತೆ ಎಲ್ಲ ಗ್ರಾಮ ಪಂಚಾಯತಿಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಿ, ‘ಮಕ್ಕಳ ಪಂಚಾಯತ್’ ಅರಿವಿನ ಹಬ್ಬವನ್ನು ಆಯೋಜಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

‘ಗ್ರಾಮಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸ್ಥಳೀಯ ಆಡಳಿತದ ಬಗ್ಗೆ ಅರಿವಿರಬೇಕು, ಗ್ರಾಮ ಪಂಚಾಯತಿಗಳ ಆಶಯ, ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಅರಿವಿನ ಹಬ್ಬ ಯಶಸ್ವಿಯಾಗಲಿ. ಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಹುಟ್ಟಹಬ್ಬದ ದಿನವಾದ ಮಕ್ಕಳ ದಿನದಂದು ರಾಜ್ಯದ ಎಲ್ಲ ಮಕ್ಕಳಿಗೂ ಶುಭಾಶಯ ಹೇಳುತ್ತಿದ್ದೇನೆ’

ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News