ಸೆ.26ಕ್ಕೆ ಬೆಂಗಳೂರು ಬಂದ್ ವಿಚಾರ: ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ಏನು?

Update: 2023-09-23 13:11 GMT

ಬೆಂಗಳೂರು, ಸೆ. 23: ‘ರಾಜ್ಯದ ರೈತರ ಹಿತ ಕಾಯಲು ಸರಕಾರ ಬದ್ಧವಾಗಿದೆ. ಆದರೂ ವಿರೋಧ ಪಕ್ಷಗಳು ಕಾವೇರಿ ಸಮಸ್ಯೆಗೆ ರಾಜಕೀಯ ಆಯಾಮ ನೀಡುತ್ತಿವೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕಾವೇರಿ ನೀರು ಹರಿಸುವ ವಿಚಾರವಾಗಿ ಪ್ರಾಧಿಕಾರಕ್ಕೆ ರಾಜ್ಯ ಸರಕಾರ ಮನವಿ ಸಲ್ಲಿಸಿದೆ. ‘ಬಂದ್’ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಯಾರೊಬ್ಬರೂ ಕಾನೂನು ಕೈಗೆ ಎತ್ತಿಕೊಳ್ಳಬಾರದು’ ಎಂದು ಸಲಹೆ ನೀಡಿದರು.

‘ನಾವು ನಮ್ಮ ರಾಜ್ಯದ ಹಿತ ಕಾಯುತ್ತಿದ್ದೇವೆ. ಹೋರಾಟ ಮಾಡಬಾರದು ಎಂದು ನಾವು ಹೇಳುವುದಿಲ್ಲ. ರೈತ ಸಂಘಟನೆ, ಕನ್ನಡ ಸಂಘಟನೆಗಳು, ಚಿತ್ರರಂಗ, ವಿಪಕ್ಷಗಳ ಹೋರಾಟಕ್ಕೆ ನಾವು ಅಡ್ಡಿಪಡಿಸುವುದಿಲ್ಲ. ಆದರೆ, ಪ್ರತಿಭಟನೆಯಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು. ಸಂಕಷ್ಟದ ಸಂದರ್ಭದಲ್ಲಿ ವಿಪಕ್ಷಗಳು ನಿಮ್ಮ ಜೊತೆ ನಿಲ್ಲಬೇಕಿತ್ತಲ್ಲವೆ? ಎಂದು ಅವರು ಪ್ರಶ್ನಿಸಿದರು.

‘ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ ಹೊಸ ಹುರುಪಿನಲ್ಲಿ ಅವರದೇ ರಾಜಕೀಯ ಮಾಡಲು ಮುಂದಾಗಿದ್ದಾರೆ. ಅವರು ನೀರಿನಲ್ಲಿ ರಾಜಕಾರಣ ಮಾಡಿದರೆ, ನಾವು ರೈತರನ್ನು ಕಾಪಾಡುತ್ತಿದ್ದೇವೆ. ಹಿರಿಯ ನಾಯಕ ದೇವೇಗೌಡರು ಎಕನಾಮಿಕ್ ಟೈಮ್ಸ್‍ಗೆ ನೀಡಿದ್ದ ಸಂದರ್ಶನದಲ್ಲಿ ಯಾವ ಸಲಹೆ ಕೊಟ್ಟಿದ್ದಾರೆಂದು ನೀವೇ ಹೇಳಿ. ನಾನು ಏನಾದರೂ ಹೇಳಿದರೆ ಅದು ರಾಜಕಾರಣ ಆಗುತ್ತದೆ. ಅದರಲ್ಲಿ ದೇವೇಗೌಡರು ಏನು ಹೇಳಿದ್ದಾರೆಂಬುದನ್ನು ನೋಡಿದರೆ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ’ ಎಂದು ಶಿವಕುಮಾರ್ ತಿಳಿಸಿದರು.

‘ಕಾವೇರಿ ಇಡೀ ದಕ್ಷಿಣ ಭಾರತದ ಆಸ್ತಿ’ ಎಂದ ಶಿವಕುಮಾರ್, ‘ಅಮಿತ್ ಶಾ ಜತೆ ಕುಮಾರಸ್ವಾಮಿ ಕಾವೇರಿ ವಿಚಾರವಾಗಿ ಚರ್ಚೆ ಮಾಡಿದ್ದೇವೆ ಎಂದು ಹೇಳಿರುವ ಬಗ್ಗೆ ವರದಿ ಬಂದಿದೆ. ಅವರು ಏನು ಚರ್ಚೆ ಮಾಡಿದ್ದಾರೆ, ಅವರ ನುಡಿಮುತ್ತು ಏನು ಎಂದು ಹೇಳಿದರೆ ನಾವು ಕೇಳುತ್ತೇವೆ. ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಬೇಕೆಂದು ದೇವೇಗೌಡರು ಸ್ಪಷ್ಟವಾಗಿ ಹೇಳಿದ್ದಾರೆಂದು ಹೇಳಿದರು.

‘ಬೆಂಗಳೂರು ಬಂದ್ ನೆಪದಲ್ಲಿ ಬೆಂಗಳೂರು ನಗರದ ಘನತೆಗೆ ಧಕ್ಕೆ ಮಾಡಿದರೆ ನಿಮ್ಮ ಹೃದಯಕ್ಕೆ ನೀವೇ ಚುಚ್ಚಿಕೊಂಡಂತೆ. ನಾವು ಎಲ್ಲ ರೀತಿಯಲ್ಲಿ ರೈತರ ಹಿತ ಕಾಯುತ್ತಿದ್ದೇವೆ. ಈ ಬಂದ್‍ನಿಂದ ಅವರಿಗೆ ಏನು ಲಾಭ? ಲಾಭ ಆಗುವುದಿದ್ದರೆ ಮಾಡಲಿ. ನಿಮ್ಮ ಪರವಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ದಯಮಾಡಿ ಬಂದ್‍ನಂತಹ ತಪ್ಪು ಮಾಡಬೇಡಿ’

-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News