ಬಿಲ್‌ನ 30 ದಿನಗಳ ಗಡುವು ಮೀರಿದಲ್ಲಿ, ಗ್ರಾಹಕರ ವಿದ್ಯುತ‌ ಸಂಪರ್ಕ ಕಡಿತ : ಬೆಸ್ಕಾಂ

Update: 2024-08-30 15:14 GMT

ಬೆಂಗಳೂರು : ಬಿಲ್ ಬಂದ 30 ದಿನದೊಳಗೆ ವಿದ್ಯುತ್ ಶುಲ್ಕ ಪಾವತಿಸದಿದ್ದಲ್ಲಿ ಮತ್ತು ಹೆಚ್ಚುವರಿ ಭದ್ರತಾ ಠೇವಣಿ ಮೊತ್ತ ಪಾವತಿಸದಿದ್ದಲ್ಲಿ ಕೆಇಆರ್‌ಸಿ ನಿಯಮಾವಳಿ ಅನ್ವಯ ಗ್ರಾಹಕರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಬೆಸ್ಕಾಂ ಎಚ್ಚರಿಕೆ ನೀಡಿದೆ.

ಸೆ.1ರಿಂದ ಕಟ್ಟುನಿಟ್ಟಾಗಿ ಈ ನಿಯಮವನ್ನು ಪಾಲಿಸಲು ನಿರ್ಧರಿಸಿರುವ ಬೆಸ್ಕಾಂ, ಗೃಹ ಮತ್ತು ವಾಣಿಜ್ಯ ಬಳಕೆದಾರರು, ಅಪಾರ್ಟ್‍ಮೆಂಟ್‍ಗಳು ಹಾಗೂ ತಾತ್ಕಲಿಕ ವಿದ್ಯುತ್ ಸಂಪರ್ಕ ಪಡೆದ ಗ್ರಾಹಕರು ನಿಗದಿತ 30 ದಿನದೊಳಗೆ ಬಿಲ್ ಪಾವತಿಸದಿದ್ದಲ್ಲಿ ಮೀಟರ್ ರೀಡಿಂಗ್‍ಗೆ ಬರುವ ದಿನ ಅಂದರೆ ಪ್ರತಿ ತಿಂಗಳ ಮೊದಲ 15 ದಿನದಲ್ಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು. ಹಾಗಾಗಿ, ಗ್ರಾಹಕರು ಸಕಾಲದಲ್ಲಿ ಶುಲ್ಕ ಪಾವತಿಸುವಂತೆ ಎಂದು ಬೆಸ್ಕಾಂ ತಿಳಿಸಿದೆ.

ಪ್ರತಿ ತಿಂಗಳ ಮೊದಲ 15 ದಿನದಲ್ಲಿ ಮೀಟರ್ ಮಾಪನ ಮಾಡಿದ ಬಳಿಕ, ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಲೈನ್‍ಮೆನ್‍ಗಳ ಜತೆ ಮಾಪಕ ಓದುಗರು ಮತ್ತೆ ಅದೇ ಸ್ಥಳಕ್ಕೆ ತೆರಳುತ್ತಿದ್ದರು. ಮುಂದೆ ಮಾಪಕ ಓದುಗರೊಂದಿಗೆ ಇರುವ ಲೈನ್‍ಮೆನ್‍ಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರ ವಿದ್ಯುತ್ ಸರಬರಾಜನ್ನು ಬಿಲ್ ನೀಡುವ ಸಮಯದಲ್ಲೇ ಸ್ಥಗಿತಗೊಳಿಸಲಿದ್ದಾರೆ.

ಆನ್‍ಲೈನ್ ಮೂಲಕ ವಿದ್ಯುತ್ ಬಿಲ್ ಪಾವತಿಸಿದ ಸಂದರ್ಭದಲ್ಲಿ ಕೆಲವೊಮ್ಮೆ ಬೆಸ್ಕಾಂ ಸಾಫ್ಟ್‌ ವೇರ್ ನಲ್ಲಿ ವಿವರ ನಮೂದಾಗದೇ ಇದ್ದಾಗ, ಬಾಕಿ ತೋರಿಸುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ವಿದ್ಯುತ್ ಕಡಿತಕ್ಕೆ ಮುಂದಾದರೆ, ಸಿಬ್ಬಂದಿಗೆ ಬಿಲ್ ರಸೀದಿ ತೋರಿಸುವುದರಿಂದ ವಿದ್ಯುತ್ ಕಡಿತ ಮಾಡಲಾಗುವುದಿಲ್ಲ. ಹಾಗಾಗಿ, ನಮ್ಮ ಸಿಬ್ಬಂದಿಯೊಂದಿಗೆ ಸಹಕರಿಸಿ ಎಂದು ಬೆಸ್ಕಾಂ ಪ್ರಕಟನೆಯಲ್ಲಿ ಮಾಹಿತಿ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News