ಬೆಂಗಳೂರು: ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶ, ಮೂವರು ವಿದೇಶಿಯರು ಸೇರಿ 14 ಮಂದಿ ಸೆರೆ

Update: 2023-09-16 12:55 GMT

ಬೆಂಗಳೂರು, ಸೆ.16: ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೆÇಲೀಸರು ಕಾರ್ಯಾಚರಣೆ ನಡೆಸಿ 7.83 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದು ಮೂವರು ವಿದೇಶಿಯರು ಸೇರಿ 14 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಶನಿವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಕವಸ್ತುಗಳ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದ್ದು, ಅಪಾರ ಪ್ರಮಾಣದಲ್ಲಿ ಡ್ರಗ್ ವಶ ಪಡಿಸಿಕೊಳ್ಳಲಾಗಿದೆ. ಬೆಂಗಳೂರು ಸಿಸಿಬಿ ಪೊಲೀಸರಿಂದ ಉತ್ತಮ ಕಾರ್ಯಾಚರಣೆ ನಡೆದಿದೆ. ವಿದ್ಯಾರಣ್ಯ ಪುರ, ಬನಶಂಕರಿ, ಕಾಟನ್‍ಪೇಟೆ ಸೇರಿ 7 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

14 ಜನ ಆರೋಪಿಗಳಿಂದ ಒಟ್ಟು ಎಂಟು ಮಾದರಿಯ ವಿವಿಧ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನಲ್ಲಿ ಮೊದಲ ಬಾರಿಗೆ ಮೆಫೆಡ್ರೌನ್ ಎಂಬ ಡ್ರಗ್ಸ್ ಪತ್ತೆಯಾಗಿದ್ದು, ಒಟ್ಟು 1 ಕೆಜಿ 800 ಗ್ರಾಂ ಮೆಫೆಡ್ರೌನ್ ವಶಕ್ಕೆ ಪಡೆಯಲಾಗಿದೆ ಎಂದು ಬಿ.ದಯಾನಂದ್ ಹೇಳಿದರು.

ಆರೋಪಿಗಳು ಮೆಫೆಡ್ರೌನ್ ಡ್ರಗ್ಸ್ ಒಂದು ಗ್ರಾಂ ಅನ್ನು 15 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು. ಇನ್ನು ಈ ಪ್ರಕರಣದಲ್ಲಿ ಬಂಧಿತನಾದ ನೈಜೀರಿಯಾ ಮೂಲದ ಫ್ರಾನ್ಸಿಸ್ ಎಂಬ ಆರೋಪಿ 2012ರಲ್ಲಿ ಭಾರತಕ್ಕೆ ಬಂದಿದ್ದ. ಈತನ ಬಳಿ ಮೆಫ್ರೆಡ್ರೌನ್ ಜೊತೆಗೆ ಕೊಕೇನ್ ಮತ್ತು ಎಂಡಿಎಂಎ ಎಕ್ಸೆಟಸಿ ಪೌಡರ್ ಪತ್ತೆಯಾಗಿದೆ. ಈ ಒಬ್ಬ ಆರೋಪಿ ಬಳಿಯೇ 3.80 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಬಿ.ದಯಾನಂದ್ ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News