ಬೆಂಗಳೂರು: ಮಣಿಪುರ ಹಿಂಸಾಚಾರ ತಡೆಯುವಂತೆ ಒತ್ತಾಯ

Update: 2023-07-15 16:21 GMT

ಬೆಂಗಳೂರು, ಜು. 15: ‘ಮಣಿಪುರದಲ್ಲಿ ಮೇ 3ರಂದು ಎರಡು ಜನಾಂಗೀಯ ಗುಂಪುಗಳ ಸಂಘರ್ಷದಿಂದ ಆರಂಭವಾದ ಗದ್ದಲವು ತೀವ್ರ ಹಿಂಸಾಚಾರ ಸ್ವರೂಪವನ್ನು ಪಡೆದುಕೊಂಡಿದೆ. ಹಾಗಾಗಿ ಕೇಂದ್ರ ಸರಕಾರವು ಹಿಂಸಾಚಾರ ತಡೆಯಬೇಕು’ ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟದ ಕಾರ್ಯಕರ್ತರು ಧರಣಿ ನಡೆಸಿದರು.

ಶನಿವಾರ ಇಲ್ಲಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸಿದ ಒಕ್ಕೂಟದ ಕಾರ್ಯಕರ್ತರು, ‘ಮಣಿಪುರ ಹಿಂಸಾಚಾರದಿಂದ 200 ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ, 300 ಜನ ಗಾಯಗೊಂಡಿದ್ದಾರೆ, ಸರಿ ಸುಮಾರು 60 ಸಾವಿರ ಜನರು ಸ್ಥಳಾಂತರವಾಗಿದ್ದಾರೆ. ಪರಿಸ್ಥಿತಿ ಚಿಂತಾಜನಕವಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬರುವಂತೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಶಸ್ತ್ರಾಸ್ತ್ರ ಸಜ್ಜಿತ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಸುಮಾರು 5,053 ಪ್ರಕರಣಗಳು ವರದಿಯಾಗಿವೆ ಎಂದು ಆರೋಪಿಸಿದರು.

ಸಾಂಸ್ಕøತಿಕ ಮತ್ತು ಧಾರ್ಮಿಕ ವೈವಿಧ್ಯತೆಗೆ ಹೆಸರುವಾಸಿ ಆಗಿರುವ ಮಣಿಪುರವು ಇತ್ತೀಚಿನ ಈ ಘಟನೆಗಳಿಂದ ಭೀಕರ ಪರಿಣಾಮವನ್ನು ಎದುರಿಸುತ್ತಿದೆ. ವಿವಿಧ ಧಾರ್ಮಿಕ ಸಮುದಾಯಗಳ ಶಾಂತಿಯುತ ಸಹಬಾಳ್ವೆಗೆ ಈ ಘಟನೆಗಳಿಂದ ಭಂಗ ಉಂಟಾಗಿದೆ. ಉದ್ದೇಶಿತ ಹಿಂಸಾಚಾರ, ಚರ್ಚ್‍ಗಳ ಧ್ವಂಸ ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಟ್ಟುಕೊಂಡು ಒಡ್ಡುವ ಬೆದರಿಕೆಗಳು ಸಮುದಾಯದ ಸದಸ್ಯರಲ್ಲಿ ಅಪಾರ ಭಯ ಮತ್ತು ವೇದನೆಯನ್ನು ಉಂಟುಮಾಡಿದೆ. ಇಂತಹ ಹಿಂಸಾಚಾರಗಳು ವ್ಯಕ್ತಿಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೆ ನಮ್ಮ ಸಮಾಜದ ರಚನೆಯನ್ನು ನಾಶಪಡಿಸುತ್ತವೆ ಎಂದು ಅವರು ತಿಳಿಸಿದ್ದಾರೆ.

ಈ ಸಂಘರ್ಷವು ಬಹುತೇಕ ಹಿಂದೂಗಳೇ ಇರುವ ಮೈತೇಯಿ ಸಮುದಾಯ ಹಾಗೂ ಬಹುತೇಕ ಕ್ರೈಸ್ತರೇ ಇರುವ ಕುಕಿ ಬುಡಕಟ್ಟು ಸಮುದಾಯದ ನಡುವೆ ನಡೆಯುತ್ತಿದೆ. ಕೋಪೋದ್ರಿಕ್ತ ಗುಂಪುಗಳು ಶಸ್ತ್ರಾಸ್ತ್ರ ಸಜ್ಜಿತವಾಗಿ ಮನೆಗಳನ್ನು, ಚರ್ಚುಗಳನ್ನು, ಹಾಗೂ ಕಚೇರಿಗಳನ್ನು ಧ್ವಂಸ ಮಾಡಿ, ಬೆಂಕಿ ಹಚ್ಚಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಮಿಲಿಟರಿ ಹಾಗೂ ಸರಕಾರಗಳು ಅಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಡೆಸಿರುವ ಇತಿಹಾಸ ಇದೆ ಎಂಬುದನ್ನು ನಾವೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಸಂತ್ರಸ್ತ ಕುಟುಂಬಗಳಿಗೆ 10 ಲಕ್ಷ ರೂಪಾಯಿಗಳ ನೆರವು ಹಾಗೂ ಕುಟುಂಬಸ್ಥರಿಗೆ ಉದ್ಯೋಗವನ್ನು ನೀಡುವ ಕ್ರಮವನ್ನು ಸ್ವಾಗತಿಸುತ್ತೇವೆ. ಇದಕ್ಕಿಂತಲೂ ಹೆಚ್ಚಿನ ಪರಿಹಾರವನ್ನು ಅವರಿಗೆ ನೀಡುವ ಅಗತ್ಯವಿದೆ. ಸಂತ್ರಸ್ಥ ಸಮುದಾಯದ ಭರವಸೆ ಮತ್ತು ವಿಶ್ವಾಸವನ್ನು ಮರು ಗಳಿಸುವುದು ಅತ್ಯಂತ ಪ್ರಮುಖ ವಿಚಾರವಾಗಿದೆ. ಶಸ್ತ್ರಸಜ್ಜಿತರನ್ನು ನಿಶಸ್ತ್ರಗೊಳಿಸುವುದು ಹಾಗೂ ಸಮಾಜ ವಿರೋಧಿ ಅಂಶಗಳನ್ನು ಮಟ್ಟ ಹಾಕಿ, ಅವರು ಕಾನೂನನ್ನು ಕೈಗೆತ್ತಿಕೊಳ್ಳವುದನ್ನು ತಡೆಯುವುದು ತುರ್ತಾಗಿದೆ. ನಾಶವಾದ ಮನೆಗಳು, ಚರ್ಚುಗಳು, ಹಾಗೂ ಸಾರ್ವಜನಿಕ ಆಸ್ತಿಗಳನ್ನು ಮರುಸ್ಥಾಪಿಸಿ, ರಾಜ್ಯವು ಸಹಜ ಸ್ಥಿತಿಗೆ ಮರಳುವಂತೆ ಮಾಡುವುದು ಅನಿವಾರ್ಯವಾಗಿದೆ ಎಂದು ಧರಣಿನಿತರು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ಒಕ್ಕೂಟ ವೇದಿಕೆಯ ಅಧ್ಯಕ್ಷರೂ ಆಗಿರುವ ಆಚ್ ಬಿಷಪ್ ಡಾ.ಪೀಟರ್ ಮಚಾದೊ, ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ, ಕಾಂತರಾಜ್, ಪ್ರೊ. ಜಾಫೆಟ್, ಆಂಟನಿ ವಿಕ್ರಮ್, ಶಶಿಂತಾ, ಫಾ.ಸಿಫ್ರಾನ್ಸಿಸ್, ಫಾ.ಜಯನಾಥನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

 

 

 


 



 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News