ಬೆಂಗಳೂರು: ಫೆಲೆಸ್ತೀನ್ ಜನರ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟನೆ

Update: 2023-12-02 15:45 GMT

ಬೆಂಗಳೂರು: ಫೆಲೆಸ್ತೀನ್ ಜನರ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿ ಖಂಡಿಸಿ ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ವಿವಿಧ ಸಂಘಟನೆಗಳ ನೂರಾರು ಜನರು ಒಗ್ಗೂಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಇಸ್ರೇಲ್‍ನ ನೀತಿಯನ್ನು ಹಲವು ರಾಷ್ಟ್ರಗಳು ವಿರೋಧಿಸಿವೆ. ಹಿಂದೆ ಮಹಾತ್ಮ ಗಾಂಧಿ, ನೆಹರು ಸೇರಿದಂತೆ ಹಲವರು ಖಂಡಿಸಿದ್ದಾರೆ. ಆದರೆ, ಈಗ ಬಿಜೆಪಿ ಸರಕಾರ ಫೆಲೆಸ್ತೀನ್ ಪರ ನಿಲುವು ಮಂಡಿಸದೆ, ತಟಸ್ಥವಾಗಿ ಉಳಿದಿದೆ. ಇದು ಖಂಡನೀಯವಾಗಿದ್ದು, ಭಾರತವು ಫೆಲೆಸ್ತೀನ್ ಪರ ನಿಲ್ಲಬೇಕು. ಫೆಲೆಸ್ತೀನಿಯರ ಸ್ವಾತಂತ್ರ್ಯ ಮತ್ತು ಉಳಿವಿಗಾಗಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಫೆಲೆಸ್ತೀನ್ ಪರ ಕಾರ್ಯಕ್ರಮಗಳು, ಸಭೆಗಳನ್ನು ನಡೆಸಲು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆ ಅನುಮತಿ ನೀಡುತ್ತಿಲ್ಲ. ಈ ಮೂಲಕ ಸರಕಾರವು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಧೋರಣೆಗಳನ್ನು ಜನರ ಮೇಲೆ ಹೇರುತ್ತಿವೆ. ಪೊಲೀಸರು ಸಂವಿಧಾನಬದ್ಧವಾಗಿ ಆಯ್ಕೆಯಾದವರು, ಅವರು ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಮನ ಎಂದು ಹೇಳಿದರು.

ಜೆಎನ್‍ಯುನ ನಿವೃತ್ತ ಪ್ರಾಧ್ಯಾಪಕ ಪ್ರೊ.ಪುರುಷೊತ್ತಮ ಬಿಳಿಮಲೆ ಮಾತನಾಡಿ, ಫೆಲೆಸ್ತೀನ್ ಮತ್ತು ಇಸ್ರೇಲ್‍ನ ನಡುವೆ ಸಂಘರ್ಷ ಏರ್ಪಟ್ಟಿದ್ದು, ಇಸ್ರೇಲ್ ಸರಕಾರವು ಫೆಲೆಸ್ತೀನ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದೆ. ಶಸ್ತ್ರಾಸ್ತ್ರ ವಿಷಯದಲ್ಲಿ ಫೆಲೆಸ್ತೀನ್ ಮತ್ತು ಇಸ್ರೇಲ್ ನಡುವೆ ಅಸಮಾನತೆ ಇದೆ. ಇಸ್ರೇಲ್ ಹೆಚ್ಚು ಶಸ್ತ್ರಾಸ್ತ್ರ ಉಪಯೋಗಿಸಿ ನಿರಂತರ ದಾಳಿ ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೋರಾಟಗಾರ್ತಿ ವರಲಕ್ಷ್ಮಿ ಮಾತನಾಡಿ, “ಫೆಲೆಸ್ತೀನ್ ಪರ ನಾವು ನಿಂತರೆ ರಾಜ್ಯ ಸರಕಾರ ಅದನ್ನು ವಿರೋಧಿಸುತ್ತಿದೆ. ರಾಜ್ಯ ಸರಕಾರದ ಈ ನಡೆ ಸರಿಯಲ್ಲ. ಏಕೆಂದರೆ ಇದು ಅಭಿವ್ಯಕ್ತ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ವಕೀಲ ಬಿ.ಟಿ.ವೆಂಕಟೇಶ್, ಕೋಮುಸೌಹಾರ್ದ ವೇದಿಕೆಯ ಕೆ.ಎಲ್. ಅಶೋಕ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News