ಡೆಂಗ್ಯೂ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸಿ : ಜಿಲ್ಲಾಧಿಕಾರಿಗಳಿಗೆ ದಿನೇಶ್ ಗುಂಡೂರಾವ್ ಸೂಚನೆ

Update: 2024-07-04 14:40 GMT

Photo : x/@dineshgrao

ಬೆಂಗಳೂರು : ಡೆಂಗ್ಯೂ ನಿಯಂತ್ರಣ ಕ್ರಮಗಳ ಜೊತೆಗೆ ಝೀಕಾ ವೈರಸ್ ಬಗ್ಗೆಯೂ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಸಿಇಒ ಅವರಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಡಿ.ಸಿ, ಸಿಇಒ ಹಾಗೂ ಸ್ಥಳೀಯ ಪಾಲಿಕೆಯ ಅಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಸಚಿವರು, ಡೆಂಗ್ಯೂ ಹಾಟ್ ಸ್ಪಾಟ್‌ಗಳನ್ನು ಪತ್ತೆ ಹಚ್ಚಿ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.‌

ಎಲ್ಲಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕಂಡುಬರುತ್ತವೆ, ಅಂತಹ ಸ್ಥಳಗಳಲ್ಲಿ ಫೀವರ್ ಕ್ಲಿನಿಕ್ ತೆರಯಲು ಸಲಹೆ ನೀಡಿದರು. ಇಂಥಹ ಪ್ರದೇಶಗಳಲ್ಲಿ ಯಾರಿಗೆ ಜ್ವರ ಕಂಡುಬಂದರೂ, ಕಡ್ಡಾಯವಾಗಿ ಡೆಂಗ್ಯೂ ಟೆಸ್ಟಿಂಗ್ ಗೆ ಒಳಪಡಿಸಿ. ಆರಂಭದಲ್ಲೇ ಡೆಂಗ್ಯೂ ಪತ್ತೆ ಹಚ್ಚಿದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ವಿಳಂಭವಾದಾಗ ಸಾವುಗಳು ಸಂಭವಿಸುತ್ತವೆ ಎಂದು ಅಧಿಕಾರಿಗಳಿಗೆ ಹೇಳಿದರು.

ಜನರಿಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಮುಂದಾಗಬೇಕು.‌ ಮನೆ ಮನೆಗೆ ಆಶಾ ಕಾರ್ಯಕರ್ತರು ಭೇಟಿ ಮಾಡಬೇಕು. ಮೆಡಿಕಲ್ ಆಫಿಸರ್ಸ್ ಸ್ಕೂಲ್‌ಗಳಿಗೆ ಭೇಟಿ ನೀಡಿ, ವಿಜ್ಞಾನ ಶಿಕ್ಷಕರ ಮೂಲಕ ಮಕ್ಕಳಲ್ಲಿ ಡೆಂಗ್ಯೂ ಕುರಿತು ತಿಳಿಹೇಳಬೇಕು. ಪ್ರಮುಖವಾಗಿ ಲಾರ್ವಾ ಉತ್ಪತ್ತಿ ಕಂಡುಬಂದಲ್ಲಿ, ಅದನ್ನು ನಾಶ ಪಡಿಸುವ ಕೆಲಸ ಆದ್ಯತೆಯ ಮೇಲೆ ಕೈಗೊಳ್ಳಿ ಎಂದು ಸಿಇಒ ಹಾಗೂ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವರು ಸೂಚನೆ ನೀಡಿದರು.‌

ಜಿಲ್ಲಾವಾರು ಡೆಂಗ್ಯೂ ಕೇಸ್‌ಗಳನ್ನು ಪ್ರಕಟಿಸಲು ಹೇಳಿದ ಸಚಿವರು, ಶಿಕ್ಷಣ ಇಲಾಖೆ ಸೇರಿ ಎಲ್ಲಾ ಇಲಾಖೆಯವರು ಕೂಡ ವಾರಕ್ಕೆ ಒಂದು ದಿನ ಶುಕ್ರವಾರ ಫೀಲ್ಡ್ ಗಿಳಿದು ಕೆಲಸ ಮಾಡಬೇಕು ಎಂದರು.‌ ಒಂದು‌ ಗಂಟೆಯ ಕಾಲವಾದರು ಡೆಂಗ್ಯೂ ನಿವಾರಣೆಗೆ ಮೀಸಲಿಡಲು ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂದಾಗಬೇಕು.‌ ಡೆಂಗ್ಯೂ ಟೆಸ್ಟ್ ಗೆ ನಿಗದಿ ಮಾಡಿರುವ ದರವನ್ನು  ಕಡ್ಡಾಯವಾಗಿ ಪಾಲಿಸಲು ಕ್ರಮ‌ ವಹಿಸುವಂತೆಯೂ ಆರೋಗ್ಯ ಸಚಿವ ದಿನೇಶ್ ಗೂಂಡೂರಾವ್ ಅಧಿಕಾರಿಗಳಿಗೆ ಸೂಚಿಸಿದರು.

ಈಡಿಸ್ ಸೊಳ್ಳೆಯಿಂದಲೇ ಝೀಕಾ ವೈರಸ್ ಕೂಡ ಕಂಡು ಬರುತ್ತದೆ. ಪಕ್ಕದ ರಾಜ್ಯದಲ್ಲಿ ಝೀಕಾ ವೈರಸ್ ಕಂಡುಬಂದಿರುವುದರಿಂದ ರಾಜ್ಯದಲ್ಲೂ ಎಚ್ವರಿಕೆ ವಹಿಸುವುದು ಅಗತ್ಯವಾಗಿದೆ. ಶಿವಮೊಗ್ಗದಲ್ಲಿ ಒಂದು ಶಂಕಿತ ಝೀಕಾ ಕೇಸ್ ಪತ್ತೆಯಾಗಿದೆ.‌ ಆದರೆ ಇನ್ನೂ ಕನ್ಪರ್ಮ್ ಆಗಿಲ್ಲ‌. ಝೀಕಾ ಅಷ್ಟೇನು ಅಪಾಯಕಾರಿ ಅಲ್ಲದಿದ್ದರೂ ಅಲರ್ಟ್ ಆಗಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News