'ಗೃಹ ಜ್ಯೋತಿ' ಯಿಂದ ಭಾಗ್ಯ ಜ್ಯೋತಿ, ಕುಟುಂಬ ಜ್ಯೋತಿ, ಅಮೃತ ಜ್ಯೋತಿ ಫಲಾನುಭವಿಗಳಿಗೆ ಭರ್ಜರಿ ಕೊಡುಗೆ
ಬೆಂಗಳೂರು, ಜು.18: ರಾಜ್ಯದಲ್ಲಿ ಈ ಹಿಂದಿನಿಂದ ಜಾರಿಯಲ್ಲಿದ್ದ ಭಾಗ್ಯ ಜ್ಯೋತಿ, ಕುಟುಂಬ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳ ಫಲಾನುಭವಿಗಳಿಗೆ ರಾಜ್ಯ ಸರಕಾರ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದೆ. ಈ ಮೂರು ಜ್ಯೋತಿ ಯೋಜನೆಗಳನ್ನು ಗೃಹ ಜ್ಯೋತಿ ಯೋಜನೆಯಲ್ಲಿ ವಿಲೀನ ಮಾಡಿದೆ. ಇದರೊಂದಿಗೆ 50 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಗೃಹಜೋತಿಯ ಲಾಭ ಸಿಗಲಿದೆ ಎಂದು ಸರಕಾರ ತಿಳಿಸಿದೆ.
ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ ಪ್ರತೀ ಫಲಾನುಭವಿ ಕುಟುಂಬಗಳಿಗೆ ತಲಾ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಜುಲೈ 1ರಿಂದಲೇ ಈ ಯೋಜನೆ ಜಾರಿಗೆ ಬಂದಿದೆ. ಆದರೆ ಈಗಾಗಲೇ ಜಾರಿಯಲ್ಲಿರುವ ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಮತ್ತು ಅಮೃತ ಜ್ಯೋತಿ ಯೋಜನೆಗಳ ಭವಿಷ್ಯವೇನು? ಅವುಗಳ ಫಲಾನುಭವಿಗಳಿಗೆ ಇದು ಅನ್ವಯವಾಗಲಿದೆಯೇ ಎಂಬ ಗೊಂದಲ ತಲೆದೋರಿತ್ತು. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು, ಈ ಮೂರು ಯೋಜನೆಗಳ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಏನಿದೆ ಹೊಸ ಮಾರ್ಗಸೂಚಿಯಲ್ಲಿ ?
ಭಾಗ್ಯ ಜ್ಯೋತಿ ಮತ್ತು ಕುಟುಂಬ ಜ್ಯೋತಿ ಫಲಾನುಭವಿಗಳಿಗೆ ಈವರೆಗೆ 40 ಯೂನಿಟ್ ವಿದ್ಯುತ್ ಉಚಿತ ನೀಡಲಾಗುತ್ತಿತ್ತು. ಈಗ ಅದನ್ನು 53 ಯೂನಿಟ್ ಗಳಿಗೆ ಏರಿಸಲಾಗಿದೆ ಹಾಗೂ 10 ಶೇ. ಹೆಚ್ಚುವರಿ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಲಾಗಿದೆ. ಅದೇರೀತಿ ಅಮೃತ ಜ್ಯೋತಿ ಯೋಜನೆಯಡಿ ಎಸ್ಸಿ-ಎಸ್ಟಿ ಕುಟುಂಬಗಳಿಗೆ ಈ ವರೆಗೆ 75 ಯೂನಿಟ್ ವಿದ್ಯುತ್ ನೀಡಲಾಗುತ್ತಿತ್ತು. ಈಗ ಅದನ್ನು 75 ಯೂನಿಟ್ ಮತ್ತು 10 ಶೇ. ಹೆಚ್ಚು ವಿದ್ಯುತ್ ನೀಡುವುದಾಗಿ ಇಂಧನ ಇಲಾಖೆ ಘೋಷಿಸಿದೆ.
ಇದೀಗ ಈ ಮೂರು ಜ್ಯೋತಿಗಳ ಫಲಾನುಭವಿಗಳಲ್ಲಿ ಇದ್ದಂತಹ ಗೊಂದಲವನ್ನು ಇಂಧನ ಸಚಿವ ಕೆ.ಜೆ.ಜಾರ್ಜ್ ನಿವಾರಿಸಿದ್ದಾರೆ. ಈಗ ಎಲ್ಲರೂ ಗೃಹ ಜ್ಯೋತಿ ವ್ಯಾಪ್ತಿಗೆ ಬರುತ್ತಾರೆ ಅವರಿಗೆ ಹೆಚ್ಚುವರಿ ಯೂನಿಟ್ ವಿದ್ಯುತ್ ಉಚಿವಾಗಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.