ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-01-01 10:56 GMT

ಬೆಂಗಳೂರು: "ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಜ್ಯ ಸರಕಾರ ಸಿಬಿಐ ತನಿಖೆ ಅನುಮತಿಯನ್ನು ಹಿಂಪಡೆದಿದ್ದರೂ ಕಿರುಕುಳ ಮುಂದುವರೆದಿದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ನಾಯಕರಿಂದ ದೊಡ್ಡ ಷಡ್ಯಂತ್ರ ನಡೆಯುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪ ಮಾಡಿದರು.

ಕೇರಳ ಮೂಲದ ಜೈ ಹಿಂದ್ ಚಾನೆಲ್ ಎಂ.ಡಿ ಹಾಗೂ ತಮಗೆ ಸಿಬಿಐ ನೋಟಿಸ್ ಜಾರಿ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ನಂತರವೂ ಸಿಬಿಐನವರೂ ಸಬ್ ರಿಜಿಸ್ಟ್ರಾರ್ ಕಚೇರಿ, ಸರಕಾರಿ ಕಚೇರಿ, ಸಹಕಾರಿ ಸೊಸೈಟಿ, ನಾನು ಅಧ್ಯಕ್ಷನಾಗಿರುವ ಸಂಸ್ಥೆ, ಸೇರಿದಂತೆ ಅನೇಕರಿಗೆ ನೊಟೀಸ್ ಕೊಟ್ಟಿದ್ದಾರೆ. ಯಾವ ಲೆಕ್ಕಾಚಾರದ ಮೇಲೆ ಈ ನೊಟೀಸ್ ಕೊಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಮೇಲ್ನೋಟಕ್ಕೆ ಅವರು ನನಗೆ ಹಾಗೂ ಪಕ್ಷಕ್ಕೆ ತೊಂದರೆ ನೀಡಲು ದೊಡ್ಡ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿಬಿಐ ತನಿಖೆಯನ್ನು ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಿದೆ. ಸಿಬಿಐಗೆ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದಿರುವುದನ್ನು ಹೈಕೋರ್ಟ್ ಒಪ್ಪಿದ್ದರೂ ಸಿಬಿಐ ಯಾಕೆ ನೊಟೀಸ್ ನೀಡುತ್ತಿದೆ ಎಂಬುದು ಗೊತ್ತಿಲ್ಲ. ಅವರ ಬಳಿ ನನ್ನ ಎಲ್ಲಾ ದಾಖಲೆಗಳು ಇವೆ. ಲೋಕಾಯುಕ್ತಕ್ಕೆ ಪ್ರಕರಣ ಹಸ್ತಾಂತರವಾಗಿರುವ ಹಿನ್ನೆಲೆಯಲ್ಲಿ ಈ ಎಲ್ಲ ದಾಖಲೆಗಳನ್ನು ಸಿಬಿಐ, ಲೋಕಾಯುಕ್ತಕ್ಕೆ ನೀಡಬೇಕಿದೆ ಎಂಬುದು ನನಗಿರುವ ಕಾನೂನಿನ ಅರಿವು ಎಂದರು.

ʼಅವರು ಏನು ಬೇಕಾದರೂ ಮಾಡಲಿ. ನನ್ನನ್ನು ಜೈಲಿಗೆ ಕಳಿಸುವ ಬಗ್ಗೆ ಅನೇಕ ಬಿಜೆಪಿ ನಾಯಕರು ಹಿಂದೆ ಹೇಳಿದ್ದರು. ಬಹಳಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಲು ಆಹ್ವಾನ ನೀಡಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ. ಅವರು ಏನಾದರೂ ಮಾಡಿಕೊಳ್ಳಲಿ. ನನಗೆ ಎಲ್ಲಿ ನ್ಯಾಯ ಸಿಗಬೇಕೋ ಅಲ್ಲಿ ಸಿಗುತ್ತದೆʼ ಎಂದು ತಿಳಿಸಿದರು.

ಶೇಕಡಾ 10 ರಷ್ಟು ತನಿಖೆಯೂ ಮಾಡಿರಲಿಲ್ಲ

ಸಿಬಿಐ ಅಧಿಕಾರಿಗಳಿಗೆ ನಾನು ಎಲ್ಲ ದಾಖಲೆ ನೀಡಿದ್ದೆ. ಅವರು ಶೇಕಡಾ 10 ರಷ್ಟು ಕೂಡ ತನಿಖೆ ಮಾಡಿರಲಿಲ್ಲ. ಆದರೆ ನ್ಯಾಯಾಲಯದಲ್ಲಿ ಶೆ.90 ರಷ್ಟು ತನಿಖೆ ಮುಗಿದಿದೆ ಎಂದು ಹೇಳಿದ್ದರು. ಯಾವ ಲೆಕ್ಕಾಚಾರದಲ್ಲಿ ಆ ರೀತಿ ಹೇಳಿದ್ದಾರೋ ಗೊತ್ತಿಲ್ಲ. ಅವರು ಏನಾದರೂ ಮಾಡಲಿ. ನನ್ನನ್ನು ಒಳಗೆ ಹಾಕಿಸುವ ಆಸೆ ಇದ್ದರೆ ಹಾಕಿಸಲಿ. ನಾನು ಸಿದ್ಧನಿದ್ದೇನೆ ಎಂದರು.

ಮಾಧ್ಯಮದ ವರದಿ ಸುಳ್ಳು

ಲೋಕಸಭೆ ಚುನಾವಣೆಯಲ್ಲಿ ಸಚಿವರ ಸ್ಪರ್ಧೆಗೆ ನಾನು ಮಾಡಿದ್ದ ಶಿಫಾರಸಿಗೆ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ ಎಂಬ ವರದಿ ಬಗ್ಗೆ ಕೇಳಿದಾಗ, "ಅದೆಲ್ಲವೂ ಸುಳ್ಳು. ನಾನು ಯಾವುದೇ ಸಚಿವರನ್ನು ಅಭ್ಯರ್ಥಿ ಮಾಡಿ ಎಂದು ವರದಿ ಕೊಟ್ಟಿಲ್ಲ. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಹೈಕಮಾಂಡ್ ನನಗೆ ವರದಿ ಕೇಳಿದ್ದು, ನಾನು ಇನ್ನೂ ವರದಿಯನ್ನೇ ನೀಡಿಲ್ಲ. ಇದೇ 4 ರಂದು ದಿಲ್ಲಿ ಯಲ್ಲಿ ಸಭೆ ಕರೆದಿದ್ದಾರೆ. ಯಾವುದೇ ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ನೀಡಿಲ್ಲ. ಲೋಕಸಭೆ ಅಭ್ಯರ್ಥಿ ಹೆಸರು ಶಿಫಾರಸು ಮಾಡಲು ಮಂತ್ರಿಗಳಿಗೆ ಜವಾಬ್ದಾರಿ ನೀಡಿದ್ದೆ. ನಮ್ಮ ನಾಯಕರು ಲೋಕಸಭೆ ಚುನಾವಣೆ ಬಗ್ಗೆ ಚರ್ಚಿಸಲು ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ. ಅವರು ಯಾವ ಮಾನದಂಡ ನಿಗದಿ ಮಾಡುತ್ತಾರೋ ಅದರ ಪ್ರಕಾರ ನಾವು ಕೆಲಸ ಮಾಡುತ್ತೇವೆ. ಸಚಿವರ ಸ್ಪರ್ಧೆ ಬಗ್ಗೆ ಶಿಫಾರಸು ವರದಿಯನ್ನೇ ಕೊಡದಿರುವಾಗ, ಅದನ್ನು ಹೈಕಮಾಂಡ್ ನಾಯಕರು ತಿರಸ್ಕರಿಸಿದ್ದಾರೆ ಎಂಬ ಮಾಧ್ಯಮದ ವರದಿ ಸುಳ್ಳು. ಪಕ್ಷ ಹೇಳಿದಂತೆ ಎಲ್ಲರೂ ಕೇಳುತ್ತಾರೆ. ಜ.10 ರಂದು ಸಭೆ ಕರೆದಿದ್ದು, ಬೆಳಗ್ಗೆ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳ ಜೊತೆ ಮಧ್ಯಾಹ್ನ ಬ್ಲಾಕ್ ಅಧ್ಯಕ್ಷರ ಜೊತೆ ಸಭೆ ಮಾಡುತ್ತೇವೆ. ಈ ಸಭೆಯಲ್ಲಿ ಮುಖ್ಯಮಂತ್ರಿಗಳು ಸಹ ಭಾಗವಹಿಸಬೇಕು ಎಂದು ಆಹ್ವಾನ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News