ಅಕ್ಕಿಯಲ್ಲಿ ದೊಡ್ಡ ಗೋಲ್ ಮಾಲ್ ನಡೆಯುತ್ತಿದೆ: ಬಸವರಾಜ ಬೊಮ್ಮಾಯಿ

Update: 2023-07-04 14:14 GMT

ಬೆಂಗಳೂರು, ಜು. 4: ‘ಕಾಂಗ್ರೆಸ್ ಸರಕಾರ ಮೊದಲ ದಿನವೇ ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸಿದೆ. ಜನರಿಗೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ, ಅನುಷ್ಠಾನ ಮಾಡುವಲ್ಲಿ ಮೋಸ ಮಾಡುತ್ತಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಯಜಮಾನಿ ಎಂದು ಹೇಳಿ ಮನೆಗಳಲ್ಲಿ ಗಲಾಟೆ ಶುರುವಾಗುವಂತೆ ಮಾಡಿದ್ದಾರೆ. ಗೃಹಜ್ಯೋತಿ ಯೋಜನೆ ಘೋಷಿಸಿ ಮೂರು ಪಟ್ಟು ವಿದ್ಯುತ್ ಬಿಲ್ ಏರಿಸಿ ಜನರಿಗೆ ಭಾರ ಮಾಡಿದ್ದಾರೆ. ಬಸ್‍ಗಳಲ್ಲಿ ಗೊಂದಲ ಹೆಚ್ಚಾಗಿದೆ. ಶಾಲಾ ಮಕ್ಕಳಿಗೆ ಬಸ್ ಇಲ್ಲ’ ಎಂದು ದೂರಿದರು.

‘ಯುವ ನಿಧಿ ಏನಾಗಿದೆ ಗೊತ್ತಿಲ್ಲ. ಅಕ್ಕಿಯಲ್ಲಿ ದೊಡ್ಡ ಗೋಲ್‍ಮಾಲ್ ನಡೆಯುತ್ತಿದೆ. ಎಷ್ಟು ಅಕ್ಕಿ ಕೊಡುತ್ತಾರೆ ಗೊತ್ತಿಲ್ಲ. ಈ ಸರಕಾರದ ಮುಖವಾಡ ಬಯಲಾಗಿದೆ. ಇವರ ಬಣ್ಣ ಬಯಲಾಗಿದೆ. ಗ್ಯಾರಂಟಿ ಯೋಜನೆಗಳ ಗೊಂದಲಗಳ ಕುರಿತು ಚರ್ಚಿಸಲು ನಾವು ಅವಕಾಶ ಕೇಳಿದ್ದೇವೆ. ಅದಕ್ಕೆ ಅವಕಾಶ ಕೊಡದೇ ಸರಕಾರ ಮೊಂಡತನ ಮಾಡುತ್ತಿದೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಬರ ಆವರಿಸಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ಇದೆಲ್ಲದರ ಬಗ್ಗೆ ಚರ್ಚೆ ಮಾಡಬೇಕಿದೆ. ಸರಕಾರ ಮೊದಲ ದಿನವೇ ವಿರೋಧ ಪಕ್ಷವನ್ನು ಬಾವಿಗೆ ತಳ್ಳುವ ಕೆಲಸ ಮಾಡಿದೆ. ಸರಕಾರ ದೊಖಾ ಮಾಡಿದೆ. ನಮ್ಮ ಬೇಡಿಕೆ ಇಷ್ಟೊಂದು ನೀವು ಕೊಟ್ಟ ಭರವಸೆ ಈಡೇರಿಸಿ ಎಂದು ಆಗ್ರಹಿಸಿದ್ದೇವೆ ಎಂದು ಹೇಳಿದರು.

ಬಿಎಸ್‍ಸಿ ಬಹಿಷ್ಕಾರ: ಮುಂದಿನ ಕಲಾಪದ ಬಗ್ಗೆ ಚರ್ಚೆ ಮಾಡುವ ಕುರಿತು ಕಲಾಪ ಸಲಹಾ ಸಮಿತಿ(ಬಿಎಸ್‍ಸಿ) ಸಭೆ ಕರೆದಿದೆ. ಈಗಿನ ಗೊಂದಲ ಬಗೆ ಹರಿಸದೆ ಮುಂದಿನ ಕಲಾಪದ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಹೀಗಾಗಿ ನಾವು ಬಿಎಸ್‍ಸಿ ಬಹಿಷ್ಕಾರ ಮಾಡಿದ್ದೇವೆ. ನಾವು ನಮ್ಮ ಹೋರಾಟವನ್ನು ಮುಂದುವರೆಸುತ್ತೇವೆ’

-ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News