ಸೂರಜ್ ರೇವಣ್ಣಗೆ ಬಿಗ್ ರಿಲೀಫ್: ಪರಿಷತ್ ಸದಸ್ಯ ಸ್ಥಾನ ಅಸಿಂಧು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನದಿಂದ ಸೂರಜ್ ರೇವಣ್ಣ ಅವರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಹೊಳೆನರಸೀಪುರದ ಎಲ್.ಹನುಮೇಗೌಡ ಎಂಬುವವರು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿದ್ದ ಹೈಕೋರ್ಟ್ ಏಕ ಸದಸ್ಯ ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಹಾಸನ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಗೆದ್ದಿದ್ದರು. ಸೂರಜ್ ರೇವಣ್ಣ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಯಾವುದೇ ಮಾಹಿತಿ ತಿಳಿಸಿಲ್ಲ. ಅಲ್ಲದೆ, ಪತ್ನಿಯ ವಿವರ, ನಗದು ಸೇರಿ ಮತ್ತಿತರೆ ವಿವರಗಳನ್ನು ನಮೂದಿಸುವ ಕಾಲಂನಲ್ಲಿ ಅನ್ವಯವಾಗುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.
ಇದರ ಜೊತೆಗೆ, ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆಯೂ ಸರಿಯಾದ ಮಾಹಿತಿ ನೀಡಿಲ್ಲ. ಚುನಾವಣೆಯಲ್ಲೂ ಅಕ್ರಮ ಎಸಗಿದ್ದಾರೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.