ಸರಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆ ಅಕ್ರಮ ತಡೆಗಟ್ಟಲು ವಿಧೇಯಕ ಮಂಡನೆ

Update: 2023-12-06 11:14 GMT

ಬೆಳಗಾವಿ: ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆಗಳಲ್ಲಿ ಅನುಚಿತ ವಿಧಾನ ಬಳಕೆಯನ್ನು ನಿರ್ಬಂಧಿಸಲು ಮುಂದಾಗಿರುವ ರಾಜ್ಯ ಸರಕಾರವು, ಮಹತ್ವದ ಕರ್ನಾಟಕ ಸಾರ್ವಜನಿಕ ಪರೀಕ್ಷೆ(ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ-2023 ಅನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದೆ.

ಪರೀಕ್ಷಾ ಅಕ್ರಮ ನಡೆಸುವವರಿಗೆ 10 ವರ್ಷಗಳ ವರೆಗೆ ಜೈಲು ಶಿಕ್ಷೆ, 10 ಕೋಟಿ ರೂ.ವರೆಗೆ ದಂಡ, ಸ್ವತ್ತು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಅಂತಹ ಅಪರಾಧಗಳ ವಿಚಾರಣೆಗಾಗಿ ನ್ಯಾಯಾಲಯಗಳನ್ನು ಸ್ಥಾಪಿಸಲು ಅವಕಾಶ ಕಲ್ಪಿಸುವ ವಿಧೇಯಕ ಇದಾಗಿದೆ.

ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗುವ ಅಭ್ಯರ್ಥಿಗೆ 5 ವರ್ಷಗಳ ಕಠಿಣ ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸುವುದು ಮತ್ತು ಒಳಸಂಚು ನಡೆಸುವವರಿಗೆ 8 ರಿಂದ 12 ವರ್ಷಗಳ ಕಠಿಣ ಶಿಕ್ಷೆ ಮತ್ತು 15 ಲಕ್ಷ ರೂ.ಗಳಿಂದ 10 ಕೋಟಿ ರೂ.ಗಳವರೆಗೆ ದಂಡ ವಿಧಿಸಲು ಈ ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ವಿಧೇಯಕದ ಉದ್ದೇಶ ಮತ್ತು ಕಾರಣಗಳು: ಸಾರ್ವಜನಿಕ ಪರೀಕ್ಷೆಗಳ ಅಕ್ರಮಗಳು ಹಾಗೂ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಬಳಕೆಯು ಮಿತಿ ಮೀರುತ್ತಿದೆ. ಈ ವಿಷಯವು ಕೆಲವು ಸೀಮಿತ ವ್ಯಕ್ತಿಗಳಿಗೆ ಹಗೂ ನಿಹಿತವಾದ ಹಿತಾಸಕ್ತಿಗಳಿಗೆ ಅಗಾದ ಪ್ರಮಾಣದ ಹಣಕಾಸಿನ ಅನುಕೂಲಗಳನ್ನು ಒಳಗೊಂಡಿರುವುದು ಮಾತ್ರವಲ್ಲದೆ ರಾಜ್ಯದ ಯುವ ಜನತೆಯ ಪ್ರಗತಿಯ ಅವಕಾಶಗಳನ್ನು ಕುಂಠಿತಗೊಳಿಸುತ್ತಿದೆ.

ಈ ಅಕ್ರಮ ಜಾಲವು ನ್ಯಾಯ ಸಮ್ಮತ ರೀತಿಯಲ್ಲಿ ಸಾರ್ವಜನಿಕ ಪರೀಕ್ಷೆಗಳನ್ನು ನಡೆಸುವುದನ್ನು ವಿಫಲಗೊಳಿಸಲು ಹೊಸ ಹೊಸ ಭ್ರಷ್ಟ ಮತ್ತು ಅನುಚಿತ ವಿಧಾನಗಳನ್ನು ಬಳಸುವ ಮೂಲಕ ಲಕ್ಷಾಂತರ ಪ್ರತಿಭಾನ್ವಿತ ಮತ್ತು ಕಠಿಣ ಪರಿಶ್ರಮ ಪಡುವ ಯುವ ಆಕಾಂಕ್ಷಿಗಳಿಗೆ ಅವಕಾಶಗಳಿಂದ ವಂಚಿತಗೊಳಿಸುತ್ತಿವೆ.

ರಾಜ್ಯ ಸರಕಾರದ ಅಡಿಯಲ್ಲಿನ ಹುದ್ದೆಗಳ ನೇಮಕಾತಿಯ ವಿಷಯದಲ್ಲಿ ಪ್ರಶ್ನೆಪತ್ರಿಕೆಗಳ ಸೋರಿಕೆಯು ಕೇವಲ ಜನಸಾಮಾನ್ಯರ ನಂಬಿಕೆ ದ್ರೋಹವಾಗುವುದು ಮಾತ್ರವಲ್ಲದೆ ರಾಜ್ಯವು ಗಣನೀಯವಾದ ಆಡಳಿತಾತ್ಮಕ ವೆಚ್ಚವನ್ನೂ ಅನುಭವಿಸುತ್ತಿದೆ ಮತ್ತು ಪರೀಕ್ಷೆ ನಡೆಸುವುದು ಪ್ರಶ್ನಾರ್ಹವಾದಾಗ ರಾಜ್ಯದ ಗೌರವಕ್ಕೂ ಚ್ಯುತಿಯಾಗುತ್ತದೆ.

ಸಂವಿಧಾನದ ಸಮಾನ ಅವಕಾಶಗಳ ನಿಯಮಾವಳಿಗೆ ಒಳಪಟ್ಟು, ನ್ಯಾಯ ಸಮ್ಮತ ಹಾಗೂ ನ್ಯಾಯಯುತ ಕಾರ್ಯವಿಧಾನದ ಮೂಲಕ ಹುದ್ದೆಗಳಿಗೆ ಆಯ್ಕೆ ಮಾಡುವುದು ಸಂವಿಧಾನದ ಅಗತ್ಯ. ಪ್ರಶ್ನೆ ಪತ್ರಿಕೆಗಳ ಸೋರಿಕೆ ಅಪರಾಧವನ್ನು ಮತ್ತು ಸ್ವಾಯತ್ತ ಸಂಸ್ಥೆಗಳು, ಪ್ರಾಧಿಕಾರಗಳು, ಮಂಡಳಿಗಳು ಅಥವಾ ನಿಗಮವನ್ನು ಒಳಗೊಂಡಂತೆ ರಾಜ್ಯ ಸರಕಾರದಡಿಯಲ್ಲಿನ ಯಾವುದೇ ಹುದ್ದೆಗೆ ನೇಮಕಾತಿ ಉದ್ದೇಶಕ್ಕಾಗಿ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನುಚಿತ ವಿಧಾನವನ್ನು ಬಳಸುವುದನ್ನು ಪ್ರತಿಬಂಧಿಸಲು ಮತ್ತು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಈ ವಿಧೇಯಕವನ್ನು ಪ್ರಸ್ತಾವಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News