ಕೋವಿಡ್ ಕಾರ್ಯಪಡೆಯಲ್ಲಿದ್ದು, ಕೋವಿಡ್ ಪರೀಕ್ಷೆ ನೀತಿ ನಿರೂಪಣೆ ಮುಖ್ಯಸ್ಥರಾಗಿ ನೀವು ಮಾಡಿದ್ದೇನು ?

Update: 2024-04-19 07:25 GMT

ಬೆಂಗಳೂರು: ಕೋವಿಡ್ ಕಾರ್ಯಪಡೆಯಲ್ಲಿದ್ದು, ಕೋವಿಡ್ ಪರೀಕ್ಷೆ ನೀತಿ ನಿರೂಪಣೆ ಮುಖ್ಯಸ್ಥರಾಗಿ ನೀವು ಮಾಡಿದ್ದೇನು ? ಎಂದು ಬೆಂಗಳೂರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಡಾ. ಸಿ ಎನ್ ಮಂಜುನಾಥ್ ಅವರನ್ನು ಖ್ಯಾತ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಫೇಸ್‌ ಬುಕ್‌ ನಲ್ಲಿ ಪೋಸ್ಟ್‌ ಮಾಡಿರುವ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು,  ಕರ್ನಾಟಕದ 2020-23ರ ಭಾಜಪ ಸರ್ಕಾರದಡಿಯಲ್ಲಿ ಕೋವಿಡ್ ಕಾರ್ಯಪಡೆಯ ಸದಸ್ಯರಾಗಿದ್ದು, ಕೋವಿಡ್ ಪರೀಕ್ಷೆಗಳ ನೀತಿ ನಿರೂಪಣೆಗೆ ಮುಖ್ಯಸ್ಥರಾಗಿದ್ದು, ಈಗ ದೇಶದ ನೀತಿ ನಿರೂಪಿಸುವ ಸಂಸತ್ತಿನ ಸದಸ್ಯರಾಗಲು ಚುನಾವಣೆಗೆ ಅದೇ ಭಾಜಪದಿಂದ ಸ್ಪರ್ಧಿಸುತ್ತಿರುವುದರಿಂದ ದಯವಿಟ್ಟು ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವಿರಾ? ಎಂದು  ಸರಣಿ ಪ್ರಶ್ನೆಗಳನ್ನು ಡಾ. ಸಿ ಎನ್ ಮಂಜುನಾಥ್ ಅವರ ಮುಂದಿಟ್ಟಿದ್ದಾರೆ.

1. ಹೃದ್ರೋಗ ತಜ್ಞರಾಗಿದ್ದುಕೊಂಡು ಸೋಂಕು ರೋಗ ಪತ್ತೆ ಮತ್ತು ನಿಯಂತ್ರಣಗಳ ಬಗ್ಗೆ ತಮಗೆ ಆಳವಾದ ಮಾಹಿತಿಯಿದೆಯೇ, ಅಥವಾ ಆ ವಿಚಾರಗಳಲ್ಲಿ ತಮಗಿಂತ ನುರಿತರಾದವರಿಗೆ, ಹೆಚ್ಚು ಅರ್ಹರಾದವರಿಗೆ ಕಾರ್ಯಪಡೆಯ ಸ್ಥಾನವನ್ನು ಬಿಟ್ಟುಕೊಡಬೇಕಿತ್ತೇ?

2. ಕೋವಿಡ್ ಸೋಂಕಿಗೆ ಲಾಕ್ ಡೌನ್ ಮಾಡುವುದಕ್ಕೆ ವೈಜ್ಞಾನಿಕ, ವೈದ್ಯಕೀಯ ಆಧಾರಗಳಿದ್ದವೇ? ದೇಶದ ಅತ್ಯುನ್ನತ ವೈದ್ಯಕೀಯ ಸಂಸ್ಥೆ ಐಸಿಎಂಆರ್ ಏಪ್ರಿಲ್ 2020ರ ಮೊದಲಲ್ಲೇ ಲಾಕ್ ಡೌನ್ ನಮ್ಮ ದೇಶಕ್ಕೆ ಅಗತ್ಯವಿಲ್ಲ, ಬದಲಿಗೆ ಹಾನಿಯನ್ನುಂಟು ಮಾಡಬಹುದು ಎಂದು ನೇರವಾಗಿ ಹೇಳಿದ್ದು ತಮಗೆ ತಿಳಿದಿರಲಿಲ್ಲವೇ?

3. ಕೋವಿಡ್ ಪತ್ತೆಯ ಪರೀಕ್ಷೆಗಳ ಬಗ್ಗೆ ತಮ್ಮ ನೇತೃತ್ವದಲ್ಲಿ ನೀಡಿದ್ದ ಸಲಹೆಗಳಿಗೆ ವೈದ್ಯಕೀಯ, ವೈಜ್ಞಾನಿಕ ಆಧಾರಗಳಿದ್ದವೇ?

4. ಕರ್ನಾಟಕದಲ್ಲಿ ಕೋವಿಡ್ ಚಿಕಿತ್ಸೆಗೆ ಪ್ರಕಟಿಸಿದ ಅಧಿಕೃತ ಕಾರ್ಯಸೂಚಿಗಳೆಲ್ಲವೂ ಆಧಾರರಹಿತವೂ, ಅಪಾಯಕಾರಿಯೂ, ಅನಗತ್ಯ ವೆಚ್ಚ ಹಾಗೂ ಗೊಂದಲಗಳನ್ನುಂಟು ಮಾಡುವಂಥವೂ ಆಗಿದ್ದವು. ಕಾರ್ಯಪಡೆಯ ಪ್ರಮುಖ ಸದಸ್ಯರಾಗಿ ಆ ಬಗ್ಗೆ ತಾವು ಯಾವುದೇ ಅಭಿಪ್ರಾಯವನ್ನು ಮಂಡಿಸಿದ್ದಿದೆಯೇ?

5. ಕೋವಿಡ್ ಲಸಿಕೆಗಳ ಸಾಧಕ-ಬಾಧಕಗಳ ಬಗ್ಗೆ, ನಮ್ಮ ದೇಶದಲ್ಲಿ, ನಮ್ಮ ರಾಜ್ಯದಲ್ಲಿ ಅವುಗಳ ಅಗತ್ಯಗಳ ಬಗ್ಗೆ ಯಾವುದೇ ದೃಢ ಮಾಹಿತಿಗಳು ಲಭ್ಯವಾಗುವ ಮೊದಲೇ ತಾವು ಮೊದಲಿಗರಲ್ಲೊಬ್ಬರಾಗಿ ಆ ಲಸಿಕೆಯನ್ನು ಪಡೆಯಲು ಕಾರಣವೇನಿತ್ತು?

6. ಕೊರೋನ ಸೋಂಕು ಹಾಗೂ ಲಸಿಕೆಗಳ ನಂತರದ ಈ ಕಾಲದಲ್ಲಿ ಅನೇಕ ಜನರಲ್ಲಿ ಅದರಲ್ಲೂ ಯುವಜನರಲ್ಲಿ, ಹಠಾತ್ ಹೃದಯಾಘಾತ, ಹೃದಯ ಸ್ಥಂಭನ, ಪಾರ್ಶ್ವವಾಯು ಇತ್ಯಾದಿಗಳು ಹೆಚ್ಚುತ್ತಿರುವ ವರದಿಗಳಾಗುತ್ತಿರುವಾಗ, ತಮ್ಮಿಂದ ಹಾಗೂ ತಾವು ಇತ್ತೀಚಿನವರೆಗೂ ಮುಖ್ಯ ನಿರ್ದೇಶಕರಾಗಿದ್ದ ಜಯದೇವ ಹೃದ್ರೋಗ ಸಂಸ್ಥೆಯಿಂದ ಈ ಸಮಸ್ಯೆಗಳ ಬಗ್ಗೆ ಅಧ್ಯಯನಗಳಾಗಿವೆಯೇ, ಅವುಗಳ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಲಾಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವಂತೆ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News