ತ್ರಿವರ್ಣ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ಬಿಜೆಪಿ : ಕಾಂಗ್ರೆಸ್ ಆಕ್ರೋಶ
ಮಂಡ್ಯ : “ಪವಿತ್ರವಾದ ರಾಷ್ಟ್ರ ಧ್ವಜವನ್ನು ತಾಲಿಬಾನ್ ಧ್ವಜಕ್ಕೆ ಹೋಲಿಸಿದ ದೇಶದ್ರೋಹಿ ಬಿಜೆಪಿಯ ಸಿಟಿ ರವಿ ಎನ್ನುವ ಕೋಮು ಕ್ರಿಮಿ ದೇಶದ ಘನತೆಯನ್ನು ಮಣ್ಣುಪಾಲು ಮಾಡುವ ಹೇಳಿಕೆ ನೀಡಿದ್ದಾರೆ” ಎಂದು ಕಾಂಗ್ರೆಸ್ ತನ್ನ X ಖಾತೆಯ ಪೋಸ್ಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬಂಧ ಬರೆದುಕೊಂಡಿರುವ ಪೋಸ್ಟ್ ನಲ್ಲಿ ಕಾಂಗ್ರೆಸ್, “ತ್ರಿವರ್ಣ ಧ್ವಜ ಈಗ ಬಿಜೆಪಿ ಪ್ರಕಾರ ತಾಲಿಬಾನ್ ಧ್ವಜವಾಗಿದೆಯೇ? ತ್ರಿವರ್ಣ ಧ್ವಜವನ್ನು ವಿರೋಧಿಸುವ ಆರೆಸ್ಸೆಸ್ ನ ಸಿದ್ಧಾಂತವನ್ನು ಬಿಜೆಪಿ ಚಾಚೂ ತಪ್ಪದೆ ಪಾಲಿಸುತ್ತಿದೆ” ಎಂದು ಕಿಡಿಕಾರಿದೆ.
“ಬಿಜೆಪಿಗೆ INDIA , ಭಾರತದ ಸಂವಿಧಾನ, ತ್ರಿವರ್ಣ ಧ್ವಜದ ಮೇಲೂ ದ್ವೇಷ ಇಂತಹ ಬಿಜೆಪಿ ದೇಶದ್ರೋಹಿಯಲ್ಲದೆ ಇನ್ನೇನು” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಹನುಮಧ್ವಜ ತೆರವು ಖಂಡಿಸಿ ಬಿಜೆಪಿ, ಜೆಡಿಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸೋಮವಾರ ಕೆರಗೋಡು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಆಯೋಜಿಸಿದ್ದ ಪಾದಯಾತ್ರೆಯ ಸಂದರ್ಭದಲ್ಲಿ ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಿಟಿ ರವಿ “ಕಾಂಗ್ರೆಸ್ ಪಕ್ಷದವರು ಹನುಮ ಧ್ವಜವನ್ನು ತೆಗೆದು, ತಾಲಿಬಾನ್ ಧ್ವಜ ಹಾಕಲು ಉದ್ದೇಶಿಸಿದ್ದರು. ನಾವು ಹನುಮ ಧ್ವಜ ಹಾಕುತ್ತೇವೆ. ತಾಲಿಬಾನ್ ಧ್ವಜ ಹಾಕುವ ದಿನಗಳು ಮುಗಿದು ಹೋಯಿತು” ಎಂದು ಹೇಳಿಕೆ ನೀಡಿದ್ದರು.