ಬಿಜೆಪಿಗರು ದ್ವೇಷಕ್ಕಾಗಿಯೇ ದ್ವೇಷ ಎಂಬ ಅನೀತಿ ಮುಂದುವರೆಸಿದ್ದಾರೆ: ಡಾ. ಎಚ್.ಸಿ. ಮಹದೇವಪ್ಪ
ಬೆಂಗಳೂರು: ಸಚಿವ ಸಂಪುಟದ ಸದಸ್ಯ ಪ್ರಿಯಾಂಕ್ ಖರ್ಗೆ ರಾಜೀನಾಮೆಯನ್ನು ಕೇಳುತ್ತಿರುವ ಬಿಜೆಪಿಗರು ಎಂದಿನಂತೆ ಆಡಳಿತ ಪಕ್ಷದ ಮೇಲೆ ದ್ವೇಷಕ್ಕಾಗಿಯೇ ದ್ವೇಷ ಎಂಬ ತಮ್ಮ ಅನೀತಿಯನ್ನು ಮುಂದುವರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಿಡಿಗಾರಿದ್ದಾರೆ.
ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ವಿಷಯಾಧಾರಿತವಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ವಿರುದ್ಧ ಹಿಂದಿನಿಂದಲೂ ದೊಡ್ಡ ಮಟ್ಟದ ಅಸಹನೆಯನ್ನು ಹೊಂದಿರುವ ಬಿಜೆಪಿಗರು ಇದೀಗ ಬಿಜೆಪಿ ಪಕ್ಷದವರೊಂದಿಗೆ ನಂಟನ್ನು ಇಟ್ಟುಕೊಂಡಿರುವ ಸಚಿನ್ ಎಂಬ ವ್ಯಕ್ತಿಯ ಸಾವನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಈ ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿ ಇದ್ದಾಗಲೂ ಕೂಡಾ ವಿಷತಾಧಾರಿತವಾಗಿ ರಾಜಕೀಯ ಮಾಡಲು ಬಾರದೇ ಕೇವಲ ಶವ ರಾಜಕೀಯದ ಮೂಲಕವೇ ನಮ್ಮ ಸರಕಾರದ ವಿರುದ್ಧ ಅಪಪ್ರಚಾರ ನಡೆಸುವ ಕೆಟ್ಟ ಕೆಲಸ ಮಾಡಿದ್ದ ಬಿಜೆಪಿಗರು ಸಿಬಿಐ ತನಿಖೆಯ ವರದಿಗಳ ಬಂದ ನಂತರ ಸುಮ್ಮನಾಗಿದ್ದರು ಎಂದು ಮಹದೇವಪ್ಪ ತಿರುಗೇಟು ನೀಡಿದ್ದಾರೆ.
ಹಲವು ಅಪಪ್ರಚಾರದ ಪ್ರಯತ್ನಗಳ ನಡುವೆಯೂ ಜನಾಭಿಪ್ರಾಯ ಪಡೆಯುವಲ್ಲಿ ಸೋತ ಇವರು ಬಹುಮತ ಪಡೆಯಲು ವಿಫಲರಾಗಿ ನಂತರ ಇದ್ದ ಸರಕಾರ ಕೆಡವಿ ಕೆಟ್ಟ ಆಡಳಿತ ನಡೆಸಿದ್ದು ಈಗ ಇತಿಹಾಸ. ಈಗ ಸರಕಾರವನ್ನು ವಿರೋಧಿಸಲು ಕಾರಣವಿಲ್ಲದೇ ಒದ್ದಾಡುತ್ತಿರುವ ಬಿಜೆಪಿಗರು ಪ್ರಿಯಾಂಕ್ ಖರ್ಗೆಯನ್ನು ಅನಗತ್ಯವಾಗಿ ಗುರಿ ಮಾಡುತ್ತಿದ್ದು, ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಬಿಜೆಪಿಗರೇ, ವಿಷಯಾಧಾರಿತ ಹೋರಾಟ ನಡೆಸದೇ ಮತ್ತೆ ಮತ್ತೆ ಕೋಮು ರಾಜಕೀಯ, ಶವ ರಾಜಕೀಯ ಮಾಡುತ್ತಿದ್ದರೆ ಜನ ನಿಮ್ಮನ್ನು ಮತ್ತೊಮ್ಮೆ ತಿರಸ್ಕರಿಸುವುದು ನಿಶ್ಚಿತ ಎಂದು ಮಹದೇವಪ್ಪ ಕಿವಿಮಾತು ಹೇಳಿದ್ದಾರೆ.