ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಿ: ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ
ಬೆಂಗಳೂರು, ಆ. 9: ‘ಭಾರತ ಬಿಟ್ಟು ತೊಲಗಿ ಎನ್ನುವ ಹೋರಾಟ’ ಮತ್ತೆ ಆರಂಭವಾಗಿದ್ದು, ಇಂದು ಕೋಮುವಾದಿ, ಸರ್ವಾಧಿಕಾರಿ ಸರಕಾರ ತೊಲಗಿಸಲು ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂದು ಬಿಜೆಪಿ ಅವರು ಹೇಳುತ್ತಿದ್ದರು. ಇದೀಗ ನೀವೆಲ್ಲಾ ಬಿಜೆಪಿ ಮುಕ್ತ ಭಾರತಕ್ಕೆ ಸಜ್ಜಾಗಬೇಕು’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ಬುಧವಾರ ಕ್ವೀನ್ಸ್‍ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ‘ಕ್ವಿಟ್ ಇಂಡಿಯಾ ಚಳವಳಿ’ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಎಲ್ಲ್ಲ ರಾಜ್ಯಗಳ ಪ್ರಮುಖ ವಿಪಕ್ಷಗಳ ನಾಯಕರು, ಮುಖ್ಯಮಂತ್ರಿಗಳು ‘ಇಂಡಿಯಾ ರಕ್ಷಿಸಿ’ ಅಭಿಯಾನಕ್ಕೆ ಬೆಂಗಳೂರು ಸಾಕ್ಷಿಯಾಯಿತು. ಇಡೀ ‘ಇಂಡಿಯಾ’ಕ್ಕೆ ಕರ್ನಾಟಕ ಆತ್ಮವಿಶ್ವಾಸ ನೀಡಿದೆ’ ಎಂದು ಹೇಳಿದರು.
‘ಇಂಡಿಯಾ’ ಸಭೆಯ ನಂತರ ನಮ್ಮ ಪಕ್ಷದ ಎಲ್ಲ ರಾಜ್ಯಗಳ ನಾಯಕರನ್ನು ಕರೆದ ಉನ್ನತ ನಾಯಕರುಗಳು ಕರ್ನಾಟಕ ಮಾದರಿಯನ್ನು ಅನುಕರಿಸಿ ಎಂದು ಹೇಳಿದರು. ಕರ್ನಾಟಕ ಮಾದರಿ ಎಂದರೆ ಏನು? ‘ಎಲ್ಲ ವೈಮನಸ್ಸು, ವ್ಯಕ್ತಿ ಪ್ರತಿಷ್ಠೆ ಬಿಟ್ಟು, ವ್ಯಕ್ತಿ ಮುಖ್ಯವಲ್ಲ, ಪಕ್ಷ ಮುಖ್ಯ ಎಂದು ದುಡಿಯುವುದೇ’ ಕರ್ನಾಟಕ ಮಾದರಿ ಎಂದು ಕಿವಿಮಾತು ಹೇಳಿದ್ದಾರೆ, ಇದು ನಮ್ಮ ಹೆಗ್ಗಳಿಕೆ ಎಂದು ನುಡಿದರು.
ರಾಜೀವ್ ಜನ್ಮದಿನದಂದು ಗೃಹಲಕ್ಷ್ಮಿ: ಆ.20ನೆ ತಾರೀಕು ಪ್ರತಿಯೊಂದು ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ, ಮಟ್ಟದಲ್ಲಿ, ಮಹಾನಗರ ಪಾಲಿಕೆಯ ವಾರ್ಡ್ ಮಟ್ಟದಲ್ಲಿ ‘ಗೃಹಲಕ್ಷ್ಮಿ’ ಫಲಾನುಭವಿಗಳನ್ನು ಸೇರಿಸಿ ಪಕ್ಷಾತೀತವಾಗಿ ಸಂಭ್ರಮಾಚರಣೆ ಮಾಡುವಂತೆ ಸೂಚಿಸಿದ್ಧೇವೆ. 1ಕೋಟಿ 28 ಲಕ್ಷ ಮಹಿಳೆಯರ ಅರ್ಜಿಯನ್ನು ಪರಿಗಣಿಸಿದ್ದೇವೆ ಎಂದು ಅವರು ನುಡಿದರು.
ಮತದಾರರ ಹೃದಯ ಗೆಲ್ಲಬೇಕು: ‘ಮುಂದೆ ಲೋಕಸಭಾ ಚುನಾವಣೆ ಇದೆ. ನಮ್ಮ ಯೋಜನೆಗಳ ಲಾಭವನ್ನು ಬಿಜೆಪಿ ಮತದಾರರೂ ಪಡೆಯುತ್ತಿದ್ದಾರೆ. ಅಂತಹವರ ಹೃದಯ ಗೆಲ್ಲಬೇಕು, ಕರ್ನಾಟಕದಲ್ಲಿ ದ್ವೇಷ, ಅಸೂಯೆ ರಾಜಕಾರಣಕ್ಕೆ ಅವಕಾಶವಿಲ್ಲ, ಎಲ್ಲರೂ ನಮ್ಮವರೇ, ಆ ನಿಟ್ಟಿನಲ್ಲಿ ಎಲ್ಲ ನಾಯಕರು, ಕಾರ್ಯಕರ್ತರು ಕೆಲಸ ಮಾಡಬೇಕು. ನಮ್ಮ ಗುರಿ ಕೇವಲ 2024 ಮಾತ್ರವಲ್ಲ 2028ಕ್ಕೂ ಇರಬೇಕು ಎಂದು ಅವರು ಸಲಹೆ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಈಶ್ವರ್ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಪುಷ್ಪಾ ಅಮರನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು..