ಹೆಣ ಕಂಡೊಡನೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿಗೆ ಈಗ ಆಘಾತ ಉಂಟಾಗಿದೆ: ಕಾಂಗ್ರೆಸ್

Update: 2023-07-12 15:53 GMT

ಬೆಂಗಳೂರು, ಜು. 12: ‘ಹೆಣ ಕಂಡೊಡನೆ ರಣ ಹದ್ದುಗಳಂತೆ ಹಾರಿಬರುವ ಬಿಜೆಪಿಗೆ ಈಗ ಆಘಾತ ಉಂಟಾಗಿದೆ. ಬಿಜೆಪಿ ಬೆಂಬಲಿಸುವ ಸಂಘಟನೆಯ ಕಾರ್ಯಕರ್ತನನ್ನು ಬಿಜೆಪಿಯ ಕಾರ್ಯಕರ್ತರೇ ಕೊಂದು ಹಾಕಿದ್ದಾರೆ. ಹೆಣ ರಾಜಕೀಯ ಮಾಡುವ ಬಿಜೆಪಿ ಈಗ ಉತ್ತರ ನೀಡಬೇಕು. ಬಿಜೆಪಿ ಕಾರ್ಯಕರ್ತರನ್ನು ಬೆಳೆಸುತ್ತಿದೆಯೇ, ಕೊಲೆಗಡುಕರನ್ನು ಬೆಳೆಸುತ್ತಿದೆಯೇ? ಸರಕಾರದ ಮೇಲೆ ಆರೋಪಿಸಲು ಸಜ್ಜಾಗಿದ್ದ ಬಿಜೆಪಿ ನಾಯಕರು ತಮ್ಮವರೇ ಕೊಲೆಗಾರರು ಎಂದು ತಿಳಿದ ನಂತರ ಬಿಲ ಸೇರಿರುವುದೇಕೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. 

ಬುಧವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಅದ್ಯಾವುದೋ ಬ್ರಿಗೇಡ್ ಹೆಸರಲ್ಲಿ ದಲಿತ ಯುವಕನನ್ನು ದಾರಿ ತಪ್ಪಿಸಿ ಕೊಂದು ಹಾಕಿದ್ದಾರೆ ಬಿಜೆಪಿ ಕಾರ್ಯಕರ್ತರು. ದಲಿತರೆಂದರೆ ಬಿಜೆಪಿಗೆ ಯಾಕಿಷ್ಟು ಅಸಹನೆ? ದಲಿತರಿಗೆ, ಹಿಂದುಳಿದ ವರ್ಗದ ಯುವಕರಿಗೆ ಬಿಜೆಪಿ ಕೇಸರಿ ಶಾಲು ಹೊದಿಸುವುದೇ ಕೊನೆಗೊಂದು ದಿನ ಬಿಳಿ ವಸ್ತ್ರ ಹೊದಿಸಲು. ಬಿಜೆಪಿಯ ಹತ್ಯಾ ರಾಜಕೀಯಕ್ಕೆ ದಲಿತ ಹಿಂದುಳಿದ ವರ್ಗದವರನ್ನೇ ಬಲಿ ಪಡೆಯುತ್ತಿರುವುದೇಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದೆ.

‘ಹೆಣ ಕಂಡೊಡನೆ ಹಾರಿ ಬರುವ ಬಿಜೆಪಿಗರಿಗೆ ತಮ್ಮ ಆಡಳಿತದಲ್ಲಿ ನಡೆದ ಹತ್ಯೆಗಳೆಷ್ಟು? ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ ಸೇವೆ ನೀಡಿದ್ದೇಕೆ ಎಂದು ಹೇಳುವರೇ?’ ಎಂದು ಪ್ರಶ್ನಿಸಿದೆ.

‘ಜೈನಮುನಿ ಹತ್ಯೆಯ ಪ್ರಕರಣ-24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ-ಹಣದ ವ್ಯವಹಾರ. ವೇಣುಗೋಪಾಲ್ ಹತ್ಯೆಯ ಪ್ರಕರಣ-24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ-ವಯುಕ್ತಿಕ ದ್ವೇಷ. ಬೆಂಗಳೂರಿನ ಜೋಡಿ ಕೊಲೆ ಪ್ರಕರಣ- 24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ-ವಯುಕ್ತಿಕ ದ್ವೇಷ. ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿದ ನಮ್ಮ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ’ ಎಂದು ತಿಳಿಸಿದೆ.

‘ಕಲ್ಬುರ್ಗಿಯಲ್ಲಿ ನಡೆದ ಕಾನ್ಸ್ಟೆಬಲ್ ಹತ್ಯೆಯಲ್ಲಿ-ಬಿಜೆಪಿ ಮುಖಂಡನ ಪಾತ್ರ. ಟಿ.ನರಸೀಪುರದಲ್ಲಿ ನಡೆದ ವೇಣುಗೋಪಾಲ್ ಹತ್ಯೆಯಲ್ಲಿ-ಬಿಜೆಪಿ ಕಾರ್ಯಕರ್ತರ ಕೈವಾಡ. ತೀರ್ಥಹಳ್ಳಿಯಲ್ಲಿ ಅಶ್ಲೀಲ ವಿಡಿಯೋ ಬ್ಲಾಕ್ಮೇಲ್ ಪ್ರಕರಣದ ರೂವಾರಿ-ಎಬಿವಿಪಿ ಕಾರ್ಯಕರ್ತ. ಸೋಲಿನ ಹತಾಶೆಯಲ್ಲಿರುವ ಬಿಜೆಪಿ ನಮ್ಮ ಸರಕಾರದ ಹೆಸರು ಕೆಡಿಸಲು ಕೊಲೆಗಡುಕರ ಮೋರ್ಚಾಕ್ಕೆ ಚಾಲನೆ ನೀಡಿದೆಯೇ?’ ಎಂದು ವಾಗ್ದಾಳಿ ನಡೆಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News