ರಾಜ್ಯದ ಬರದ ಬಗ್ಗೆ ಕೇಂದ್ರ ನಾಯಕರ ಜತೆ ಒಂದು ದಿನವೂ ಸಭೆ ಮಾಡದ ಬಿಜೆಪಿಯವರು ನಮ್ಮ ವಿರುದ್ಧ ಮಾತಾಡುತ್ತಿದ್ದಾರೆ: ಡಿ.ಕೆ. ಶಿವಕುಮಾರ್

Update: 2024-02-04 11:14 GMT

ಬೆಂಗಳೂರು: "ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಒಂದು ದಿನವೂ ಕೇಂದ್ರ ಸರಕಾರದ ಬಳಿ ಸಭೆ ಮಾಡದ ಬಿಜೆಪಿ ನಾಯಕರು ನಮ್ಮ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದರು

ಮನಮೋಹನ್ ಸಿಂಗ್ ಅವರ ಅವಧಿಗಿಂತ ಈಗ ಕೇಂದ್ರ ಸರಕಾರ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಪ್ರತಿಕ್ರಿಯಿಸಿದ ಅವರು,"ಬಿಜೆಪಿ ನಾಯಕರು ಈ ಹಿಂದಿನ ಸರಕಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ, ಈಗ ಅವರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಅವರು ಒಪ್ಪಿಕೊಂಡಂತೆ ಅಲ್ಲವೇ?" ಎಂದು ಪ್ರಶ್ನಿಸಿದರು.

ʼಮನಮೋಹನ್ ಸಿಂಗ್ ಅವರ ಸರಕಾರ ಹೋಗಿ 10 ವರ್ಷಗಳಾಗಿವೆ. ಅವರಿಗೆ ಜ್ಞಾನ ಇರಬೇಕು. ದೇಶದಲ್ಲಿ ವಿದ್ಯಾವಂತರಿಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. 10 ವರ್ಷಗಳಿಂದ ದೇಶ ನಿಮ್ಮ ಕೈಗೆ ಅಧಿಕಾರ ಕೊಟ್ಟಿದೆ. ಮಾತೆತ್ತಿದರೆ ಡಬಲ್ ಇಂಜಿನ್ ಎಂದು ಹೇಳುತ್ತಿದ್ದರು. ಇವರು ಒಂದು ದಿನ ರಾಜ್ಯದ ಬರಗಾಲದ ಬಗ್ಗೆ ಮಾತನಾಡಲಿಲ್ಲ. ಒಂದು ದಿನವೂ ರಾಜ್ಯದ ಹಿತದ ಬಗ್ಗೆ ಕೇಂದ್ರ ಸರಕಾರದ ಬಳಿ ಮಾತನಾಡಿಲ್ಲ. ಈಗ ಮಾತೆತ್ತಿದರೆ ರಾಜ್ಯ ಸರಕಾರ ಬರ ಪರಿಹಾರ ನೀಡಲಿಲ್ಲ ಎನ್ನುತ್ತಿದ್ದಾರೆʼಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರಕಾರ ಪ್ರತಿ ರೈತರ ಖಾತೆಗೆ 2 ಸಾವಿರ ಹಾಕಿದೆ. ಇದರ ಜೊತೆಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಕೇಂದ್ರ ಸರಕಾರ ರಾಜ್ಯಕ್ಕೆ ಅನ್ಯಾಯ ಮಾಡಿರುವುದರಲ್ಲಿ ಅನುಮಾನವಿಲ್ಲ. ನೀರಾವರಿ ಇಲಾಖೆ ವಿಚಾರಕ್ಕೆ ಬಂದರೆ ಕಳೆದ ವರ್ಷ ಬಜೆಟ್ ನಲ್ಲಿ 5,300 ಕೋಟಿ ಘೋಷಣೆ ಮಾಡಿದ್ದರೋ ಇಲ್ಲವೋ? ಅದರ ಹಣವನ್ನು ಬಿಡುಗಡೆ ಮಾಡಿದ್ದಾರಾ? ಮೆಟ್ರೋ ವಿಚಾರದಲ್ಲಿ ಏನಾದರೂ ಕ್ರಮ ಕೈಗೊಂಡಿದ್ದಾರಾ? ಇಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News