ಮಂಡ್ಯ ಜಿಲ್ಲೆಯನ್ನು ಬಿಜೆಪಿ ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡುತ್ತಿದೆ : ಸಚಿವ ದಿನೇಶ್ ಗುಂಡೂರಾವ್

Update: 2024-01-30 12:02 GMT

ಬೆಂಗಳೂರು : “ಮಂಗಳೂರು, ಉಡುಪಿ, ಕಾರವಾರ ಸೇರಿದಂತೆ ಮಂಡ್ಯ ಜಿಲ್ಲೆಯನ್ನು ಬಿಜೆಪಿ ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡುತ್ತಿದೆ” ಎಂದು ಮಂಗಳವಾರ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಮಂಗಳವಾರ ʼಎಕ್ಸ್‌ʼ ನಲ್ಲಿ ಸರಣಿ ಟ್ವೀಟ್ ಹಂಚಿಕೊಂಡಿರುವ ಅವರು, “ಮಂಡ್ಯದ ಕೆರಗೋಡು ಧ್ವಜ ತೆರವು ಪ್ರಕರಣದ ಹಿಂದೆ ಜಿಲ್ಲೆಯ ಶಾಂತಿ ಕದಡುವ ದುರುದ್ದೇಶವಿದೆ. ಬಿಜೆಪಿ ಜೆಡಿಎಸ್ ನಾಯಕರು ಈ ಷಡ್ಯಂತ್ರದ ರೂವಾರಿಗಳು. ಕೆರಗೋಡು ಗ್ರಾಮದಲ್ಲಿ ನಿರ್ಮಾಣವಾಗಿದ್ದ ಧ್ವಜ ಸ್ತಂಭದಲ್ಲಿ ಕರ್ನಾಟಕದ ಧ್ವಜ ಹಾಗೂ ರಾಷ್ಟ್ರಧ್ವಜ ಹಾರಾಟಕ್ಕೆ ಮಾತ್ರ ಅನುಮತಿಯಿದೆ. ಗ್ರಾಮ ಪಂಚಾಯತಿ ಸಭೆಯಲ್ಲೂ ಇದು ಪ್ರಸ್ತಾಪವಾಗಿದೆ. ಹೀಗಿದ್ದೂ ಧಾರ್ಮಿಕ ಧ್ವಜ ಹಾರಿಸುವ ಹಿಂದಿನ ಹುನ್ನಾರ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸುವ ಒಂದು ಷಡ್ಯಂತ್ರವಷ್ಟೆ”ಎಂದು ಹೇಳಿದ್ದಾರೆ.

“ಮಂಡ್ಯ ಜಿಲ್ಲೆ ಅತ್ಯಂತ ರಾಜಕೀಯ ಪ್ರಜ್ಞಾವಂತರ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೀರಾವರಿ, ನೆಲ-ಭಾಷೆಯ ವಿಚಾರದಲ್ಲಿ ಹೋರಾಟದ ನೆಲವಾಗಿದ್ದ ಮಂಡ್ಯ ಜಿಲ್ಲೆಯನ್ನು ಕೋಮು ದಳ್ಳುರಿಯ ನೆಲವನ್ನಾಗಿ ಪರಿವರ್ತಿಸಲು ಕೋಮುವಾದಿ ಪಕ್ಷ ಬಿಜೆಪಿ ಪ್ರಯತ್ನಿಸುತ್ತಿದೆ. ಇಲ್ಲಿಯವರೆಗೂ ಜಾತ್ಯಾತೀತೆಯ ಲೇಬಲ್ ಅಂಟಿಸಿಕೊಂಡಿದ್ದ ಜೆಡಿಎಸ್ ಕೂಡ ಬಿಜೆಪಿಯ ಜೊತೆ ಸೇರಿ ಮಂಡ್ಯದ ವಾತಾವರಣ ಹಾಳುಮಾಡುತ್ತಿರುವುದು ವಿಪರ್ಯಾಸ. ಕೋಮು ಸಾಮರಸ್ಯಕ್ಕೆ ಹೆಸರಾಗಿದ್ದ ಮಂಡ್ಯದ ಜನತೆ ಬಿಜೆಪಿ ಜೆಡಿಎಸ್ ಸಂಚನ್ನು ಅರಿಯಬೇಕು”ಎಂದು ಪೋಸ್ಟ್ ಮಾಡಿದ್ದಾರೆ.

“ಮಂಗಳೂರು, ಉಡುಪಿ,ಕಾರವಾರ ಸೇರಿದಂತೆ ಕರಾವಳಿ ಭಾಗಗಳನ್ನು ಈಗಾಗಲೇ ಕೋಮು ಪ್ರಯೋಗ ಶಾಲೆ ಮಾಡಿಕೊಂಡಿರುವ ಬಿಜೆಪಿ, ಅಲ್ಲಿ ಅನೇಕ ಅಮಾಯಕರ ಹತ್ಯೆಗೆ ಕಾರಣವಾಗಿದೆ. ಇದೇ ರೀತಿ ಹಳೆ ಮೈಸೂರು ಭಾಗದ ಮಂಡ್ಯವನ್ನು ಕೋಮು ಪ್ರಯೋಗಶಾಲೆ ಮಾಡುವ ಸಂಚನ್ನು ಬಿಜೆಪಿ ಹಾಕಿಕೊಂಡಿದೆ. ರಾಜಕೀಯ ನೆಲೆಗಾಗಿ ಧಾರ್ಮಿಕ ಭಾವನೆ ಕೆರಳಿಸಿ ರಾಜಕೀಯ ಲಾಭ ಪಡೆದುಕೊಳ್ಳುವ ಬಿಜೆಪಿ ಅದಕ್ಕಾಗಿ ಅಮಾಯಕರನ್ನು ಬಲಿ ಹಾಕುವ ಕೆಲಸವನ್ನು ಅವ್ಯಾಹತವಾಗಿ ಮಾಡಿಕೊಂಡು ಬಂದಿದೆ. ಬಿಜೆಪಿಯ ಈ ಸಂಚನ್ನು ಮಂಡ್ಯದ ಪ್ರಜ್ಞಾವಂತ ಜನತೆ ಅರ್ಥಮಾಡಿಕೊಳ್ಳುವರು ಎಂಬ ನಂಬಿಕೆಯಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News