ಕಾಂಗ್ರೆಸ್ ಸರಕಾರ ತೊಲಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ : ಪಾದಯಾತ್ರೆ ಸಮಾರೋಪದಲ್ಲಿ ʼಮೈತ್ರಿʼ ನಾಯಕರ ಅಬ್ಬರ
ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆಯ ಮೂಲಕ ಹೋರಾಟ ಪ್ರಾರಂಭಿಸಿದ್ದು, ಈ ಸರಕಾರ ತೊಲಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಬಿಜೆಪಿ-ಜೆಡಿಎಸ್ ಮೈತ್ರಿ ನಾಯಕರು ಅಬ್ಬರಿಸಿದರು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಮೈಸೂರು ಚಲೋ ಪಾದಯಾತ್ರೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಉಭಯ ನಾಯಕರುಗಳು ವಾಗ್ದಾಳಿ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ವಿಧಾನಸಭಾ ಅಧಿವೇಶನದಲ್ಲಿ ವಾಲ್ಮೀಕಿ, ಮುಡಾ ಹಗರಣಗಳನ್ನು ಚರ್ಚಿಸದೇ ಓಡಿಹೋದ ಮುಖ್ಯಮಂತ್ರಿ ಸಿದ್ದರಾಮಯ್ಯ ರಣಹೇಡಿ ಎಂದು ಜನರು ಮಾತಾಡುತ್ತಿದ್ದಾರೆ ಎಂದು ಹರಿಹಾಯ್ದರು.
"ಸಿದ್ದರಾಮಯ್ಯ ಅವರು ಗೌರವಯುತವಾಗಿ ರಾಜೀನಾಮೆ ಕೊಡಬೇಕು. ಅಲ್ಲಿಯವರೆಗೂ ಹೋರಾಟ ನಿರಂತರ. ಆರೂವರೆ ಕೋಟಿ ಕನ್ನಡಿಗರ ವಿಶ್ವಾಸ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನವರು ವಂಚನೆ, ಮೋಸ, ಭ್ರಷ್ಟಾಚಾರ ಮಾಡಿದ್ದಾರೆ. ಬಡವರ ಪರವಾಗಿ ಮೊಸಳೆ ಕಣ್ಣೀರು ಸುರಿಸುವ, ಅಂಗವಿಕಲರಿಗೆ ಮಾಶಾಸನ ಕೊಡದ ದರಿದ್ರ ಸರಕಾರದ ವಿರುದ್ಧ ನಮ್ಮ ಹೋರಾಟ" ಎಂದು ಹೇಳಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ವಾಲ್ಮೀಕಿ ಮತ್ತು ಮುಡಾ ಹಗರಣ ತಾರ್ಕಿಕ ಅಂತ್ಯಕ್ಕೆ ಹೋರಾಟ ಮುಂದುವರಿಸಲಿದ್ದು, ನೂರಕ್ಕೆ ನೂರಷ್ಟು ಸಿದ್ದರಾಮಯ್ಯ ತಲೆದಂಡ ಖಚಿತ ಎಂದು ಹೇಳಿದರು.
ಸಿದ್ದರಾಮಯ್ಯ ಕುಟುಂಬದವರು ಸುಳ್ಳು ದಾಖಲೆ ಸೃಷ್ಠಿಸಿ ದಲಿತರ ಜಮೀನು ಭೂ ಕಬಳಿಕೆ ಮಾಡಿದ್ದಾರೆ. ಬ್ಯಾಂಕ್‌ನಿಂದಲೇ ಹಣ ವರ್ಗಾವಣೆ ಮಾಡಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ. ರಾಜ್ಯದ ಬೊಕ್ಕಸಕ್ಕೆ ಕೈ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಅಣ್ಣ ತಮ್ಮಂದಿರಂತೆ ಆಡಳಿತ ನಡೆಸಿದರು. ಉತ್ತಮ ಆಡಳಿತವನ್ನು ಜನರು ನೆನಪಿನಲ್ಲಿಟ್ಟುಕೊಂಡಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆ ನಡೆಸಿದ ಬಳಿಕ ಕಾಂಗ್ರೆಸ್ ನಾಯಕರಲ್ಲಿ ತಳಮಳ ಶುರುವಾಗಿದ್ದು, ನಾಳೆ ಚುನಾವಣೆ ಬಂದರೂ ಕಾಂಗ್ರೆಸ್ ಅನ್ನು ಜನರು ತಿರಸ್ಕರಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರುಗಳಾದ ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಷಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ಸಂಸದರುಗಳಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರುಗಳಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶಂಪೂರ್, ಟಿ.ಎಸ್.ಶ್ರೀವತ್ಸ, ಮಾಜಿ ಸಚಿವರುಗಳಾದ ಶ್ರೀರಾಮುಲು, ಸಾ.ರಾ.ಮಹೇಶ್, ಎನ್.ಮಹೇಶ್, ಸೇರಿದಂತೆ ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.
"ಕಾಂಗ್ರೆಸ್‌ನದ್ದು ಜನಾಂದೋಲನ ಅಲ್ಲ, ಧನಾಂದೋಲನ. ಕಾಂಗ್ರೆಸ್ ಡಿಎನ್‌ಎ ಯಲ್ಲಿಯೇ ಭ್ರಷ್ಟಾಚಾರ ಇದೆ. ಈಗ 14 ನಿವೇಶನಗಳನ್ನು ನೀಡಿದ ಮಾತ್ರಕ್ಕೆ ಕಳ್ಳನನ್ನು ಬಿಡಲಾಗುತ್ತದೆಯೇ?. ಕಾನೂನು ಪ್ರಕಾರ ಶಿಕ್ಷೆ ಆಗಬೇಕು. ರಾಜಕೀಯ, ಕಾನೂನು ಹೋರಾಟ ಮುಂದುವರಿಯಲಿದೆ"
-ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ.
"14 ವರ್ಷಗಳ ಹಿಂದೆ ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಇವತ್ತು ಸಿದ್ದರಾಮಯ್ಯ ಭ್ರಷ್ಟಾಚಾರದ ವಿರುದ್ಧ ನಾವು ಮೈಸೂರಿಗೆ ಪಾದಯಾತ್ರೆ ಮಾಡಿದ್ದೇವೆ. ರಾಜಿನಾಮೆ ಕೊಡುವತನಕ ಹೋರಾಟ ಬಿಡುವುದಿಲ್ಲ"
-ಶ್ರೀರಾಮುಲು,ಮಾಜಿ ಸಚಿವ.