ಐಟಿ-ಈ.ಡಿ.ಯನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡಿರುವ ಬಿಜೆಪಿ: ದಿನೇಶ್ ಗುಂಡೂರಾವ್ ಕಿಡಿ

Update: 2023-10-17 12:40 GMT

ಬೆಂಗಳೂರು, ಅ.17: ಆದಾಯ ತೆರಿಗೆ(ಐಟಿ), ಜಾರಿ ನಿರ್ದೇಶನಾಲಯ(ಈ.ಡಿ) ತನ್ನ ಜೇಬಿನಲ್ಲೆ ಇಟ್ಟುಕೊಂಡಿರುವ ಬಿಜೆಪಿ, ಯಾರ ಮೇಲಾದರೂ ಅನುಮಾನ ಇದ್ದರೆ ಪರಿಶೀಲನೆಗೆ ಕಳುಹಿಸಿಕೊಡಲಿ, ಕಾಂಗ್ರೆಸ್ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯಲ್ಲಿ ಸಿಕ್ಕಿರುವ ಹಣಕ್ಕೂ ಕಾಂಗ್ರೆಸ್ ಗೂ ಸಂಬಂಧವಿಲ್ಲ. ಬಿಜೆಪಿಯವರಿಗೆ ನಮ್ಮ ಸರಕಾರದ ವಿರುದ್ಧ ಮಾತನಾಡಲು ಯಾವುದೆ ವಿಷಯಗಳಿಲ್ಲ. ಆದುದರಿಂದ, ಆಧಾರ ರಹಿತ ಆರೋಪಗಳನ್ನು ಮಾಡುತ್ತಾ, ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಐಟಿ ದಾಳಿಗೆ ಒಳಗಾದವರು ಯಾರು? ಅವರಿಗೂ ಕಾಂಗ್ರೆಸ್ ಗೂ ಏನು ಸಂಬಂಧ? ಅವರೇನು ಕಾಂಗ್ರೆಸ್ ಕಾರ್ಯಕರ್ತರ ಅಥವಾ ಮುಖಂಡರಾ? ಎಂದು ಪ್ರಶ್ನಿಸಿದ ದಿನೇಶ್ ಗುಂಡೂರಾವ್, ಬಿಜೆಪಿ ಸರಕಾರ ಆಡಳಿತದಲ್ಲಿದ್ದಾಗ ಐಟಿ, ಈ.ಡಿ ಯವರು ಸಕ್ರಿಯವಾಗಿರುವುದಿಲ್ಲ. ಬಿಜೆಪಿಯೇತರ ಸರಕಾರಗಳು ಅಧಿಕಾರಕ್ಕೆ ಬಂದಾಗ ಇವರು ಸಕ್ರಿಯವಾಗುತ್ತಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರಕಾರವಿದ್ದಾಗ ಬಹಿರಂಗವಾಗಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಆಗ ಐಟಿ, ಈ.ಡಿ ಯವರು ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲ. ಅವರ ಕರ್ತವ್ಯ ಅವರು ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಐಟಿ ದಾಳಿಯಲ್ಲಿ ಸಿಕ್ಕಿರುವ ಹಣವನ್ನ ಕಾಂಗ್ರೆಸ್ ನವರಿಗೆ ತಳುಕು ಹಾಕುವುದು ಸರಿಯಲ್ಲ ಎಂದು ಅವರು ಹೇಳಿದರು.

ಕಾಂಗ್ರೆಸ್ ಸರಕಾರವನ್ನ ಯಾರು ಅಲುಗಾಡಿಸಲು ಸಾಧ್ಯವಿಲ್ಲ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸುಭದ್ರವಾಗಿದ್ದು, ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿ, ಜೆಡಿಎಸ್ ಸೇರಿಕೊಂಡು ಏನೆ ಪ್ರಯತ್ನ ಮಾಡಿದರೂ ಸರಕಾರವನ್ನ ಏನು ಮಾಡೋಕೆ ಆಗಲ್ಲ. ಇದು ಎಲ್ಲರಿಗೂ ಗೊತ್ತಿರುವ ವಾಸ್ತವ ಸಂಗತಿ. ಆದರೆ, ಬಿಜೆಪಿಯವರಿಗೆ ತಾವು ಏನೊ ಮಾಡಿಬಿಡುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಸಚಿವ ಸತೀಶ್ ಜಾರಕಿಹೊಳಿ ಶಾಸಕರ ಜೊತೆ ಮೈಸೂರು ದಸರಾ ಪ್ರವಾಸಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ. ಅವರ ಆತ್ಮೀಯರ ಜೊತೆ ದಸರಾ ನೋಡಲು ಮೈಸೂರಿಗೆ ಹೋಗುವುದರಲ್ಲಿ ತಪ್ಪೇನಿದೆ. ಪಕ್ಷ ಎಂದ ಮೇಲೆ ಸಣ್ಣ ಪುಟ್ಟ ವಿಭಿನ್ನ ಅಭಿಪ್ರಾಯಗಳುರುತ್ತವೆ. ಜಾರಕಿಹೊಳಿ ನಮ್ಮ ಪಕ್ಷದ ಹಿರಿಯ ನಾಯಕರು. ಯಾರದ್ದೇ ಅಸಮಾಧಾನಗಳಿದ್ದರೂ, ಅದನ್ನ ಸರಿಪಡಿಸುವಂತಹ ನಾಯಕತ್ವ ಕಾಂಗ್ರೆಸ್ ನಲ್ಲಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜೆಡಿಎಸ್ ಹೆಸರು ಬದಲಿಸಿಕೊಳ್ಳಲಿ: ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಅವರ ನಿಲುವು ಸರಿಯಾಗಿದೆ. ಜನತಾದಳ ಸೆಕ್ಯುಲರ್ ಎಂಬ ಹೆಸರಿಟ್ಟುಕೊಂಡಿರುವ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಸೆಕ್ಯುಲರ್ ಸಿದ್ಧಾಂತವೇ? ಎಂಬ ಪ್ರಶ್ನೆ ಮೂಡುತ್ತದೆ. ಆದುದರಿಂದ, ಕುಮಾರಸ್ವಾಮಿ ಅವರು ಜೆಡಿಎಸ್ ಹೆಸರು ಹೆಸರು ಬದಲಿಸಿಕೊಳ್ಳುವುದು ಒಳ್ಳೆಯದು ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News