ತಾರಕಕ್ಕೇರಿದ ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರ ರಾಜೀನಾಮೆ ಪ್ರಹಸನ
ಚಿಕ್ಕಮಗಳೂರು: ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ಪ್ರಹಸನ ತಾರಕ್ಕೇರಿದ್ದು, ನಗರಸಭೆ ಬಿಜೆಪಿ ಸದಸ್ಯರು ನಗರಸಭೆ ಅಧ್ಯಕ್ಷರ ಕುರ್ಚಿ ಬದಲಾಯಿಸಿ, ಅಧ್ಯಕ್ಷರ ಕಚೇರಿಗೆ ಬೀಗ ಹಾಕುವ ಮೂಲಕ ನಗರಸಭೆ ಅಧ್ಯಕ್ಷರ ವಿರುದ್ಧ ವಿಭಿನ್ನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಪಕ್ಷದ ಆಂತರಿಕ ಒಪ್ಪಂದದಂತೆ ಮೊದಲ ಅವಧಿಗೆ ನಗರಸಭೆ ಅಧ್ಯಕ್ಷರನ್ನಾಗಿ ವರಸಿದ್ದಿ ವೇಣುಗೋಪಾಲ್ ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದರು. ಇತ್ತೀಚೆಗೆ ರಾಜೀನಾಮೆಯನ್ನು ಹಿಂಪಡೆದು ಪ್ರವಾಸಕ್ಕೆ ತೆರಳಿದ್ದರು.
ವರಸಿದ್ದಿ ವೇಣುಗೋಪಾಲ್ ಅವರ ಈ ನಡೆಯಿಂದ ಇತರ ಬಿಜೆಪಿ ನಗರಸಭೆ ಸದಸ್ಯರು ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪಕ್ಷದ ನಿಯಮ ಉಲ್ಲಂಘನೆ ಮಾಡಿರುವುದಲ್ಲದೆ, ಪಕ್ಷ ಮುಜುಗರಕ್ಕೊಳಗಾಗುವಂತೆ ಮಾಡಿದ್ದಾರೆಂದು ಆರೋಪಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ ಅವರು ಪಕ್ಷದಿಂದ ಅಮಾನತುಗೊಳಿಸಿದ್ದರು. ಪಕ್ಷದಿಂದ ಅಮಾನತುಗೊಂಡರೂ ಬಿಜೆಪಿ ಸದಸ್ಯರ ಆಕ್ರೋಶದ ನಡುವೆಯೂ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷ ಗಾಧಿಯಿಂದ ಕೆಳಗಿಳಿಯಲು ಮುಂದಾಗುತ್ತಿಲ್ಲ. ಬಿಜೆಪಿ ಸದಸ್ಯರು ಅವಿಶ್ವಾಸ ನಿರ್ಣಾಯಕ್ಕೆ ಮುಂದಾಗಿದ್ದು, ಈ ಸಂಬಂಧ ನಗರಸಭೆ ಆಯುಕ್ತರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಬುಧವಾರ ನಗರಸಭೆಗೆ ತೆರಳಿದ ಬಿಜೆಪಿ ಸದಸ್ಯರು ಅಧ್ಯಕ್ಷರ ಕಚೇರಿಯಲ್ಲಿನ ಹೈಟೆಕ್ ಕುರ್ಚಿಯನ್ನು ಬದಲಾಯಿಸಿ, ಸಾಧಾರಣ ಕುರ್ಚಿ ಇಟ್ಟು ಅಧ್ಯಕ್ಷರು ಅಂದು ಹೇಗಿದ್ದರು, ಈಗ ಹೀಗಿದ್ದಾರೆಂದು ಅಣಕ ಮಾಡುವಂತೆ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಕಚೇರಿಗೆ ಬೀಗ ಹಾಕುವ ಮೂಲಕ ವಿಭಿನ್ನವಾಗಿ ಅಧ್ಯಕ್ಷರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ತಕ್ಷಣ ಅವಿಶ್ವಾಸ ನಿರ್ಣಯ ಸಭೆ ಕರೆಯಬೇಕು. ಅಲ್ಲಿಯವರೆಗೂ ಸರಕಾರಿ ಕಾರ್ಯಕ್ರಮ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರು ಭಾಗವಹಿಸಬಾರದು ಎಂದು ಆಗ್ರಹಿಸಿ ಮನವಿ ಸಲ್ಲಿಸಿದ್ದಾರೆ.
ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದ್ದರೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಅಧ್ಯಕ್ಷರು ಸರಕಾರಿ ಕಾರ್ಯಕ್ರಮ ಮತ್ತು ನಗರಸಭೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಕಂಡು ಬರುತ್ತಿದ್ದು, ವಿಶ್ವಾಸ ಮತಯಾಚನೆ ಮಾಡುವರೆಗೂ ಯಾವುದೇ ಸರಕಾರಿ ಸಮಾರಂಭದಲ್ಲಿ ಪಾಲ್ಗೊಳ್ಳಬಾರದು. ಅಧ್ಯಕ್ಷರು ಕಾನೂನಿಗೆ ಬೆಲೆ ಕೊಡುವುದಿದ್ದರೆ, ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲವೇ ವಿಶ್ವಾಸ ಮತಯಾಚನೆ ಸಭೆ ಕರೆಯಬೇಕು. ನಾವೆಲ್ಲರೂ ಮತ ನೀಡಿದ್ದರಿಂದ ಅವರು ನಗರಸಭೆ ಅಧ್ಯಕ್ಷರಾಗಿದ್ದಾರೆ. ಅವಿಶ್ವಾಸ ಮಂಡನೆಗೆ ಪತ್ರ ನೀಡಿದ್ದೇವೆ. ಆ ಕಾರಣದಿಂದ ಅಧ್ಯಕ್ಷರ ಕುರ್ಚಿ ಇರಬಾರದು ಎಂದು ಖುರ್ಚಿಯನ್ನು ಬದಲಾಯಿಸಿದ್ದೇವೆ ಹಾಗೂ ಕಚೇರಿ ಲಾಕ್ ಮಾಡಿದ್ದೇವೆ ಎಂದು ತಿಳಿಸಿದರು.
ಮಧುಕುಮಾರ್ ರಾಜ್ ಅರಸ್, ನಗರಸಭೆ ಸದಸ್ಯ