VIDEO- ವಿಧಾನಸಭೆ ಉಪಸಭಾಧ್ಯಕ್ಷರ ಮೇಲೆ ಕಾಗದ ಹರಿದು ಎಸೆದ ಬಿಜೆಪಿ ಶಾಸಕರು

Update: 2023-07-19 12:59 GMT

ಬೆಂಗಳೂರು, ಜು. 19: ‘ರಾಜಕೀಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಆರೋಪಿಸಿ ಸ್ಪೀಕರ್ ಪೀಠದ ಮುಂದೆ ಬಿಜೆಪಿ ಸದಸ್ಯರು ಧರಣಿ ನಡೆಸುತ್ತಿದ್ದ ವೇಳೆ ಪೀಠದಲ್ಲಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಮುಖದ ಮೇಲೆ ವಿಧೇಯಕಗಳ ಪ್ರತಿಗಳನ್ನು ಹರಿದು ಎಸೆದ ಬಿಜೆಪಿ ಶಾಸಕರ ನಡೆಯಿಂದ ವಿಧಾನಸಭೆಯಲ್ಲಿ ಕೋಲಾಹಲ ಉಂಟಾಯಿತು.

ಬುಧವಾರ ವಿಧಾನಸಭೆಯ ಬಾವಿಗಿಳಿದ ಬಿಜೆಪಿ ಸದಸ್ಯರು ‘ಇಂಡಿಯಾ ಒಕ್ಕೂಟ’ದ ಸಭೆಗೆ ಆಗಮಿಸಿದ್ದ ವಿಪಕ್ಷಗಳ ನಾಯಕರ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿರುವ ಸರಕಾರದ ನಡೆ ಖಂಡನೀಯ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸುತ್ತಿದ್ದರು. ಧರಣಿ ನಡೆವೆಯೇ ವಿಧೇಯಕ ಅಂಗೀಕಾರ ಮಾಡಲಾಯಿತು. ಈ ಪ್ರಕ್ರಿಯೆ ಬಳಿಕ ಸದನ ಮುಂದೂಡದೆ ಭೋಜನ ವಿರಾಮವನ್ನೂ ನೋಡದೆ ಬಜೆಟ್ ಮೇಲಿನ ಚರ್ಚೆಗೆ ಸ್ಪೀಕರ್ ಸೂಚನೆ ನೀಡಿದರು.

ಇದರಿಂದ ಕ್ರೋಧಗೊಂಡ ಬಿಜೆಪಿ ಸದಸ್ಯರು, ತಮ್ಮ ಪ್ರತಿಭಟನೆ ತೀವ್ರಗೊಳಿಸಿದರು. ಈ ವೇಳೆ ಪೀಠದಲ್ಲಿ ಉಪಸ್ಥಿತರಿದ್ದ ಉಪಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಬಿಜೆಪಿ ಸದಸ್ಯರು ವಿಧೇಯಕ ಪತ್ರಿಯನ್ನು ಹರಿದು ಹಾಕಿ ಪೀಠದ ಮುಂದೆ ಎಸೆದರು. ಇದರಿಂದ ಅಸಮಧಾನಗೊಂಡ ಲಮಾಣಿ ಅವರು ಪೀಠದಿಂದ ಎದ್ದು ನಿಂತು ಬಿಜೆಪಿ ಸದಸ್ಯರ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಾಜಕೀಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಇದರ ಮಧ್ಯೆ ಸ್ಪೀಕರ್ ಯು.ಟಿ.ಖಾದರ್, ಪ್ರತಿಪಕ್ಷದ ಶಾಸಕರಿಗೆ ಕಲಾಪದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಒಂದು ಹಂತದಲ್ಲಿ ಉಪಸಭಾಧ್ಯಕ್ಷರ ಮುಖದ ಮೇಲೆಯೇ ಹರಿದ ಕಾಗದವನ್ನು ಎಸೆದಿದ್ದು, ತಕ್ಷಣ ಮಾರ್ಷಲ್‍ಗಳು ಉಪಸಭಾಧ್ಯಕ್ಷರ ರಕ್ಷಣೆಗೆ ಧಾವಿಸಿ ಕಾಗದ ಎಸೆಯುವುದನ್ನು ತಡೆದರು. ಇದರಿಂದ ಸಿಟ್ಟಾದ ಉಪಸಭಾಧ್ಯಕ್ಷರು, ಬಿಜೆಪಿ ಶಾಸಕರನ್ನು ಹೊರಗೆ ಹಾಕಿ ಎಂದು ಮಾರ್ಷಲ್‍ಗಳಿಗೆ ಸೂಚಿಸಿದರು. ಈ ವೇಳೆ ಕೂಗಾಟ ಹೆಚ್ಚಾಗಿದ್ದರಿಂದ ಸದನವನ್ನು 3 ಗಂಟೆಗೆ ಮುಂದೂಡಿದರು.

ಕಾಂಗ್ರೆಸ್ ಆಕ್ಷೇಪ: ಉಪಾಸಭಾಧ್ಯಕ್ಷರ ಮೇಲೆ ಕಾಗದ ಎಸೆದ ಬಿಜೆಪಿ ಸದಸ್ಯರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ಸದಸ್ಯರ ವಿರುದ್ಧ ಘೋಷಣೆ ಕೂಗಿದರು. ‘ದಲಿತ ಉಪಸಭಾಪತಿ ಅವರನ್ನು ಬಿಜೆಪಿಯವರು ಅಪಮಾನಮಾಡಿದ್ದೀರಿ’ ಎಂದು ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾರ್ಷಲ್ ಮೇಲೆ ಆಕ್ರೋಶ ಹೊರ ಹಾಕಿದ ಆಡಳಿತ ಪಕ್ಷದ ನಾಯಕರು, ವಿಧೇಯಕ ಹರಿದು ಹಾಕಿದರೂ ಸುಮ್ಮನೆ ಇದ್ದೀರಾ?. ಸ್ಪೀಕರ್ ಮುಖಕ್ಕೆ ಎಸೆಯುತ್ತಿದ್ದಾರೆ. ನೀವು ನೋಡಿಕೊಂಡು ಸುಮ್ಮನಿದ್ದೀರಾ? ಎಂದು ಆಕ್ರೋಶ ಹೊರಹಾಕಿದರು.

ವೀಡಿಯೊ ಮಾಡಿಕೊಂಡ ಡಿಕೆಶಿ: ಸದನ ಮುಂದೂಡಿದ ಬಳಿಕ ವಿಧೇಯಕ ಪತ್ರ ಹರಿದು ಹಾಕಿರುವ ದೃಶ್ಯವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊಬೈಲ್‍ನಲ್ಲಿ ವಿಡಿಯೊ ಮಾಡಿಕೊಂಡ ದೃಶ್ಯ ಕಂಡಿತು.

ಉಪಸಭಾಧ್ಯಕ್ಷರಿಗೆ ಮಾರ್ಷಲ್‍ಗಳಿಂದ ರಕ್ಷಣೆ: ಬಿಜೆಪಿ ಸದಸ್ಯರು ವಿಧೇಯಕ ಪ್ರತಿ ಹರಿದು ಹಾಕಿದ ಹಿನ್ನಲೆಯಲ್ಲಿ ಸ್ಪೀಕರ್ ಪೀಠಕ್ಕೆ ಮಾರ್ಷಲ್‍ಗಳು ದೌಡಯಿಸಿ ರಕ್ಷಣೆ ನೀಡಿದರು. 

''ನಾನು ದಲಿತ ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದೀರಿ?'': ರುದ್ರಪ್ಪ ಲಮಾಣಿ ಬಿಜೆಪಿ ಸದಸ್ಯರ ನಡೆಯನ್ನು ಖಂಡಿಸಿದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ನಾನು ದಲಿತ ಎಂಬ ಕಾರಣಕ್ಕಾಗಿ ಈ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ. ಇದು ಸರಿಯಲ್ಲ ಎಂದರು. ಅಲ್ಲದೆ ಬಿಜೆಪಿ ಸದಸ್ಯರನ್ನು ಸದನದಿಂದ ಹೊರಹಾಕಲು ಮಾರ್ಷಲ್‍ಗಳಿಗೆ ಸೂಚನೆ ನೀಡಿದರು.  

Full View

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News