ಅಹಿಂದ ಸಮುದಾಯದಲ್ಲಿ ಒಡಕು ಮೂಡಿಸಲು ಬಿಜೆಪಿ ಪ್ರಯತ್ನ: ಸಚಿವ ಎಚ್.ಸಿ.ಮಹದೇವಪ್ಪ

Update: 2023-12-19 17:38 GMT

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಹಿಂದ ಸಮುದಾಯದಲ್ಲಿ ಒಡಕು ಮೂಡಿಸಬೇಕೆಂಬ ಕಾರಣಕ್ಕೆ ಬಿಜೆಪಿಗರು ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದು ಇದೀಗ ಎಲ್ಲ ವಿಷಯಗಳನ್ನೂ ರಾಜಕೀಯಗೊಳಿಸಲು ನಿರ್ಧರಿಸಿದಂತೆ ಕಾಣುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಮೇಲೆ ನಡೆದ ಹಲ್ಲೆಯ ಹಿಂದೆ ಸಚಿವರಾದ ಮಹದೇವಪ್ಪ ಹಾಗೂ ಪ್ರಿಯಾಂಕ್ ಖರ್ಗೆ ಕೈವಾಡ ಇದೆ ಎಂದು ಬಿಜೆಪಿಯ ಮಾಜಿ ಶಾಸಕ ಪಿ.ರಾಜೀವ್ ಆರೋಪಕ್ಕೆ ತಿರುಗೇಟು ನೀಡಿರುವ ಅವರು, ಬೆಳಗಾವಿಯ ಮಹಿಳೆಯ ಪ್ರಕರಣದಿಂದ ಆರಂಭವಾದ ಇವರ ಕೀಳು ರಾಜಕೀಯ, ಮೊನ್ನೆಯ ಕೋಲಾರದ ಮಾಲೂರಿನ ಮೊರಾರ್ಜಿ ಶಾಲೆಯ ಘಟನೆಯಲ್ಲಿ ಮುಂದುವರೆದು ಈ ದಿನ ಕಾರಜೋಳ ಅವರ ಘಟನೆಯವರೆಗೂ ವ್ಯಾಪಿಸಿದೆ ಎಂದು ಹೇಳಿದ್ದಾರೆ.

ಆದರೆ ಬೆಳಗಾವಿ ಮತ್ತು ಕೋಲಾರದ ಪ್ರಕರಣದಲ್ಲಿ ನಮ್ಮ ಸರಕಾರವು ಈ ವಿಪಕ್ಷದ ಕೀಳು ರಾಜಕೀಯ ಆರಂಭವಾಗುವ ಮೊದಲೆ ಸಮಸ್ಯೆಗೆ ಸ್ಪಂದಿಸಿ, ಸಮರ್ಥವಾಗಿ ಕಾರ್ಯನಿರ್ವಹಿಸಿತು. ಆದರೂ ವಿರೋಧ ಪಕ್ಷಗಳು ಘಟನೆಯ ಸ್ಥಳಗಳಿಗೆ ಹೋಗಿ ಸುಮ್ಮನೆ ಪ್ರತಿಭಟನೆ ಮಾಡುವ ನಾಟಕ ಮಾಡುತ್ತಿರುವುದನ್ನು ನೋಡಿದರೆ, ಇವರೇನು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಮಹದೇವಪ್ಪ ತಿಳಿಸಿದ್ದಾರೆ.

ಬಿಜೆಪಿ ಸರಕಾರದ ಅವಧಿಯಲ್ಲಿ 19 ಸಾವಿರ ಕೋಟಿ ರೂ.ಗಳ ಎಸ್ಸಿಎಸ್ಪಿ-ಟಿಎಸ್ಪಿ ಅನುದಾನವನ್ನು ನೇರವಾಗಿಯೇ ಇತರೆ ಅಭಿವೃದ್ಧಿ ಕೆಲಸಗಳಿಗೆ(ಪರಿಶಿಷ್ಟ ಸಮುದಾಯಗಳಿಗೆ ಅದು ಹೇಗೂ ಬಳಕೆ ಆಗಲಿಲ್ಲ) ವರ್ಗಾವಣೆ ಮಾಡಿದಾಗ ನಿದ್ದೆ ಮಾಡುತ್ತಿದ್ದ ಪಿ.ರಾಜೀವ್, ಈಗ ನಮ್ಮ ಸರಕಾರವು ದಲಿತರಿಗೆ ಅನುಕೂಲ ಮಾಡುವ ಕೆಲಸ ಮಾಡುತ್ತಿರುವಾಗ, ನಿದ್ದೆಯಿಂದ ಎದ್ದು ಬಂದು ಸುಳ್ಳು ಆರೋಪ ಮಾಡುತ್ತಿರುವುದು ಇವರ ಹತಾಶೆ ಮಿತಿ ಮೀರಿದೆ ಎಂದು ತೋರಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಮೊನ್ನೆ ಸಿದ್ದರಾಮಯ್ಯ ಅವರ ಸದನದ ಮಾತಿನ ವೀಡಿಯೋವನ್ನು ತಿರುಚಿ ಸಿಕ್ಕಿ ಬಿದ್ದರು, ಈ ದಿನ ಹಲ್ಲೆ ಮಾಡಿಸಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣೆ ಮುಗಿಯುವುದರ ಒಳಗಾಗಿ ಅಹಿಂದ ವರ್ಗಗಳನ್ನು ಒಡೆಯುವ ಕೆಲಸ ಮಾಡುವ ಮಾರ್ಗದಲ್ಲಿ ಇವರು ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಂಡು ಮತ್ತೊಮ್ಮೆ ಕರ್ನಾಟಕದಲ್ಲಿ ಜನಾದೇಶವನ್ನು ಕಳೆದುಕೊಳ್ಳುವುದು ನಿಶ್ಚಿತ ಎಂದು ಮಹದೇವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News