ಬಿಜೆಪಿ ಕಾರ್ಯಕರ್ತರ ಸಭೆಗೆ ಯತ್ನಾಳ್ ಬೆಂಬಲಿಗರಿಂದ ಅಡ್ಡಿ: ನಿರಾಣಿ ವಿರುದ್ಧ ಧಿಕ್ಕಾರ ಘೋಷಣೆ, ಮೌನವಾಗಿ ಕುಳಿತ ಬೊಮ್ಮಾಯಿ

Update: 2023-06-26 16:59 GMT

ವಿಜಯಪುರ, ಜೂ. 26: ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಗೆ ಕೇಂದ್ರ ಮಾಜಿ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬೆಂಬಲಿಗರು ಅಡ್ಡಿಪಡಿಸಿದ ಘಟನೆ ನಗರದಲ್ಲಿ ನಡೆದಿದೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಬಿಜೆಪಿ ನಾಯಕರು ಕಾರ್ಯಕ್ರಮ ಉದ್ಘಾಟನೆಗೆ ಮುಂದಾಗುತ್ತಿದ್ದಂತೆಯೇ ಯತ್ನಾಳ್ ವೇದಿಕೆಗೆ ಬರುವವರೆಗೂ ಕಾರ್ಯಕ್ರಮ ಉದ್ಘಾಟಿಸಬಾರದು ಎಂದು ಪಟ್ಟುಹಿಡಿದು, ಯತ್ನಾಳ್, ಯತ್ನಾಳ್ ಎಂದು ಅವರ ಬೆಂಬಲಿಗರು ಘೋಷಣೆ ಕೂಗಿದರು.

‘ಚುನಾವಣೆಯಲ್ಲಿ ಯತ್ನಾಳ್ ಅವರಿಗೆ ದ್ರೋಹ ಬಗೆದವರನ್ನು ಸಭೆಯಿಂದ ಹೊರಹಾಕಿ’ ಎಂದು ಒತ್ತಾಯಿಸಿದರು. ವೇದಿಕೆ ಮೇಲೆ ಉಪಸ್ಥಿತರಿದ್ದ ಸಂಸದ ರಮೇಶ ಜಿಗಜಿಣಗಿ, ಪರಿಷತ್ ಮಾಜಿ ಸದಸ್ಯ ಅರುಣ್ ಶಹಾಪೂರ, ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

ಗದ್ದಲದ ವಾತಾವರಣದಿಂದ ಬೇಸರಗೊಂಡ ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ, ಪರಿಷತ್ ಸದಸ್ಯ ಹನುಮಂತ ನಿರಾಣಿ ಸಭೆಯಿಂದ ಹೊರನಡೆದರು. ಯತ್ನಾಳ್ ಬೆಂಬಲಿಗರನ್ನು ತಡೆಯಲು ಪೊಲೀಸರು, ಬಿಜೆಪಿ ಮುಖಂಡರು ಹರಸಾಹಸಪಟ್ಟರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲವನ್ನೂ ಮೌನವಾಗಿ ನೋಡುತ್ತಾ ವೇದಿಕೆಯಲ್ಲಿ ಕುಳಿತಿದ್ದರು. ಸಂಸದ ಅಣ್ಣಾ ಸಾಹೇಬ ಜೊಲ್ಲೆ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕರಾದ ರಮೇಶ ಭೂಸನೂರ, ಸೋಮನಗೌಡ ಪಾಟೀಲ ಸಾಸನೂರ ವೇದಿಕೆಯಲ್ಲೇ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News