ವೈದ್ಯಕೀಯ ಸಲಕರಣೆ ಖರೀದಿ ಪ್ರಕ್ರಿಯೆ‌ ಸಂಬಂಧಿಸಿದಂತೆ ಬಿಜೆಪಿ ಆರೋಪ ಶುದ್ದ ಸುಳ್ಳು: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್

Update: 2024-09-25 18:22 GMT

ಬೆಂಗಳೂರು: ಸರಕಾರಿ ವೈದ್ಯಕೀಯ ಕಾಲೇಜುಗಳಿಗೆ ವೈದ್ಯಕೀಯ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಬಿಜೆಪಿ ಮಾಡಿರುವ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಖರೀದಿ ಪ್ರಕ್ರಿಯೆಯು ನ್ಯಾಯಸಮ್ಮತ ಮತ್ತು ಪಾರದರ್ಶಕವಾಗಿ ನಡೆದಿದೆ ಎಂದು ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಡೀ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳು ಆಗಿಲ್ಲ. ಸಾರ್ವಜನಿಕ ಸಂಗ್ರಹಣೆಗಳಲ್ಲಿ ಕರ್ನಾಟಕ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯ ಪ್ರಕಾರ ಎಲ್ಲ ಕಾರ್ಯವಿಧಾನಗಳು ಮತ್ತು ಇ-ಪ್ರೊಕ್ಯೂಮೆಂಟ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಎಂದು ಪುನರುಚ್ಚರಿಸಿದರು.

ಬಿಜೆಪಿ ವಕ್ತಾರ ರವಿಕುಮಾರ್ ಮಾಡಿರುವ ಆರೋಪ ಆಧಾರ ರಹಿತ ಮತ್ತು ದುರುದ್ದೇಶಪೂರಿತವಾಗಿದೆ. ಸರಕಾರಿ ಕಾಲೇಜುಗಳಿಗೆ ವೈದ್ಯಕೀಯ ಉಪಕರಣಗಳನ್ನು ಖರೀದಿಸುವ ಸಂಪೂರ್ಣ ಪ್ರಕ್ರಿಯೆಯಲ್ಲಿ ನಾವು ಕೆಟಿಪಿಪಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ಟೆಂಡರ್‍ಗಳನ್ನು ಆಹ್ವಾನಿಸಲಾಯಿತು. ಮತ್ತು ಅದರಂತೆ ಕಡಿಮೆ ಬಿಡ್‍ದಾರರಿಗೆ ಗುತ್ತಿಗೆ ನೀಡಲಾಗಿದೆ ಎಂದು ಅವರು ಹೇಳಿದರು.

ಪುರಾವೆಗಳಿಲ್ಲದೇ ಬಿಜೆಪಿಯ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ಇದಕ್ಕೆ ಹೆಚ್ಚಿನ ಮನ್ನಣೆ ನೀಡಬೇಕಾದ ಅಗತ್ಯವಿಲ್ಲ. ಬಿಜೆಪಿ ತನ್ನ ಆರೋಪ ಸಾಬೀತುಪಡಿಸಲು ದಾಖಲೆಗಳನ್ನು ನೀಡಲಿ ಎಂದು ಶರಣ ಪ್ರಕಾಶ್ ಪಾಟೀಲ್ ಸವಾಲು ಹಾಕಿದರು.

ಖರೀದಿ ಪ್ರಕ್ರಿಯೆಯ ವಿವಿಧ ಹಂತಗಳ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಸ್ತುತ ನಿಯಮಗಳ ಪ್ರಕಾರ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಸಂಗ್ರಹಣೆಗೆ ಸಂಬಂಧಿಸಿದ ದಾಖಲೆಗಳು ಸಾರ್ವಜನಿಕ ವಲಯದಲ್ಲಿವೆ. ನಮ್ಮ ಸರಕಾರಕ್ಕೆ ಕೆಟ್ಟ ಹೆಸರು ತರುವ ಬಿಜೆಪಿಯ ದುರುದ್ದೇಶ ಸಫಲವಾಗದು ಎಂದು ಹೇಳಿದರು.

ಕಾಲಾನುಕ್ರಮದಲ್ಲಿ ಉಪಕರಣಗಳ ಬೇಡಿಕೆ ಸೇರಿದಂತೆ ಖರೀದಿ ಪ್ರಕ್ರಿಯೆಯನ್ನು ಉಲ್ಲೇಖಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಕಾಲೇಜುಗಳು, ಸರಕಾರದ ಆಡಳಿತಾತ್ಮಕ ಒಪ್ಪಿಗೆ, ನಿವೃತ್ತ ನ್ಯಾಯಮೂರ್ತಿ ರತ್ನಕಲಾ ನೇತೃತ್ವದ ರಾಜ್ಯ ಟೆಂಡರ್ ಪೂರ್ವ ಪರಿಶೀಲನಾ ಸಮಿತಿಯಿಂದ ಅನುಮೋದನೆ ಪಡೆದು ಟೆಂಡರ್‍ಗಳು ಮತ್ತು ಗುತ್ತಿಗೆಗಳನ್ನು ನೀಡಿರುವುದು ಎಂದು ಅವರು ವಿವರಿಸಿದರು.

ಬಿಜೆಪಿಯವರು ಅಧಿಕಾರ ಕಳೆದುಕೊಂಡ ಹತಾಶೆಯಲ್ಲಿ ನಮ್ಮ ಸರಕಾರದ ಮೇಲೆ ನಿರಂತರವಾಗಿ ದ್ವೇಷ ಸಾಧಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಒಟ್ಟಾರೆಯಾಗಿ ಬಿಜೆಪಿ ನಾಯಕರು ಆರೋಪ ಮಾಡುವುದನ್ನೇ ಮುಖ್ಯ ಕಾಯಕ ಮಾಡಿಕೊಂಡಿದ್ದಾರೆ. ಇದಕ್ಕೆ ಹೆಚ್ಚಿನ ಮನ್ನಣೆ ಕೊಡಬೇಕಾಗಿಲ್ಲ ಎಂದು ಶರಣ ಪ್ರಕಾಶ್ ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News