ಪ್ರಜಾಪ್ರಭುತ್ವ ಕೊನೆಗಾಣಿಸಲು ಬಿಜೆಪಿ ಪ್ರಯತ್ನ: ಕಾಂಗ್ರೆಸ್ ಟೀಕೆ

Update: 2024-03-22 12:37 GMT

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿ ಸೋಲಿನ ಮುನ್ಸೂಚನೆಯನ್ನು ಅರಿತ ಬಿಜೆಪಿ ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ತನ್ನ ಪ್ರಯತ್ನವನ್ನು ತೀವ್ರಗೊಳಿಸುತ್ತಿದೆ’ ಎಂದು ಕಾಂಗ್ರೆಸ್, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.

ಶುಕ್ರವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ‌"ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಚುನಾವಣೆಯಲ್ಲಿ ಹಿನ್ನೆಡೆಯಾಗುವಂತೆ ನೋಡಿಕೊಳ್ಳುವ ಪ್ರಯತ್ನ ಒಂದೆಡೆಯಾದರೆ, ಇಂಡಿಯಾ ಒಕ್ಕೂಟದ ಆಮ್ ಆದ್ಮಿ ಪಕ್ಷದ ಕೇಜ್ರಿವಾಲ್ ಅವರನ್ನು ರಾತ್ರೋರಾತ್ರಿ ಬಂಧಿಸಿದ್ದು ಮತ್ತೊಂದು ಪ್ರಯತ್ನ" ಎಂದು ಟೀಕಿಸಿದೆ.

‘ಐಟಿ, ಇಡಿ, ಸಿಬಿಐಗಳು ವಿರೋಧ ಪಕ್ಷಗಳ ಮೇಲೆ ಪ್ರಹಾರ ನಡೆಸುವ ಅಸ್ತ್ರಗಳನ್ನಾಗಿಸಿಕೊಂಡಿರುವ ಕೇಂದ್ರ ಸರಕಾರ ನಿರ್ಲಜ್ಜತನದ ಎಲ್ಲ ಮಿತಿಗಳನ್ನೂ ಮೀರಿ ನಡೆಯುತ್ತಿದೆ. ಜನತೆ ಈ ಎಲ್ಲ ಅನಾಚಾರಕ್ಕೂ ಉತ್ತರ ಕೊಡಲಿದ್ದಾರೆ, ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲಿದ್ದಾರೆ’ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.

ಸಂವಿಧಾನವಿಂದು ಅಪಾಯದಲ್ಲಿದೆ: ‘ಪ್ರಜಾಪ್ರಭುತ್ವ ಪ್ರೇಮಿಯಾಗಿ ಸಂವಿಧಾನದ ಪಾಲಕರಾಗಿರುವ ಹೊಸದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನವನ್ನು ತೀವ್ರವಾಗಿ ಖಂಡಿಸುತ್ತೇನೆ. ಆಡಳಿತ ಪಕ್ಷ, ಸಾಂವಿಧಾನಿಕ ಸಂಸ್ಥೆಗಳನ್ನು ಮತ್ತು ಆಡಳಿತ ಯಂತ್ರವನ್ನು ದ್ವೇಷ ಮತ್ತು ಸ್ವಾರ್ಥ ರಾಜಕಾರಣಕ್ಕೆ ಬಳಸುತ್ತಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ತತ್ವಗಳಿಗೆಸಿಗಿದ ಅಪಚಾರ. ಚುನಾವಣೆಗಳ ವೇಳಾಪಟ್ಟಿ ಪ್ರಕಟಿಸಿದ ನಂತರ ವಿಪಕ್ಷಗಳ ನೇತಾರರನ್ನು ಅತ್ಯಂತ ಅನುಚಿತವಾಗಿ ನಡೆಸಿಕೊಳ್ಳುವುದು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಎನಿಸಿಕೊಂಡಿರುವ ಭಾರತದ ಬಗ್ಗೆ ತಪ್ಪು ಸಂದೇಶ ಸಾರುತ್ತದೆ. ಹೇಳಬೇಕೆಂದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಇಂದು ಅಪಾಯದಲ್ಲಿದೆ’

ಪ್ರೊ.ನಿರಂಜನಾರಾಧ್ಯ ವಿ.ಪಿ. ಅಭಿವೃದ್ಧಿ ಶಿಕ್ಷಣ ತಜ್ಞ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News