ಮೋದಿ ಸರಕಾರದಲ್ಲಿ ಕರ್ನಾಟಕದ ಎಲ್ಲ ಸಚಿವರು ಪ್ರಬಲ ಜಾತಿಗಳಿಗೆ ಸೇರಿದವರು

Update: 2024-06-14 13:05 GMT

ಕುಮಾರಸ್ವಾಮಿ\ ಪ್ರಹ್ಲಾದ್‌ ಜೋಶಿ\ ಶೋಭಾ ಕರಂದ್ಲಾಜೆ\ ವಿ.ಸೋಮಣ್ಣ

ಬೆಂಗಳೂರು: ನರೇಂದ್ರ ಮೋದಿ ಸರಕಾರದಲ್ಲಿ ನಾಲ್ವರು ಕರ್ನಾಟಕದ ಸಂಸದರನ್ನು ಸಚಿವರನ್ನಾಗಿ ಆಯ್ಕೆ ಮಾಡಿಕೊಂಡಿರುವ ಬಿಜೆಪಿಯ ಕ್ರಮವು ಅದು ಲೋಕಸಭಾ ಚುನಾವಣೆಗಳಲ್ಲಿ ರಾಜ್ಯದ ಪ್ರಬಲ ಜಾತಿಗಳಿಂದ ಸ್ವೀಕರಿಸಿದ್ದ ಬೆಂಬಲವನ್ನು ಪ್ರತಿಫಲಿಸುತ್ತಿದೆ. ಆದರೆ ಇದು ಹಿಂದುಳಿದ ಸಮುದಾಯಗಳನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್‌ನಿಂದ ಟೀಕೆಗೆ ಗುರಿಯಾಗಿದೆ ಎಂದು indianexpress.com ವರದಿ ಮಾಡಿದೆ.

ಕರ್ನಾಟಕದಿಂದ 17 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಈ ಪೈಕಿ ಐವರು ಲಿಂಗಾಯತರು, ನಾಲ್ವರು ಒಕ್ಕಲಿಗರು ಮತ್ತು ಮೂವರು ಬ್ರಾಹ್ಮಣರು ಸೇರಿದಂತೆ ಪ್ರಬಲ ಜಾತಿಗಳಿಗೆ ಸೇರಿದ 12 ಸಂಸದರಿದ್ದರೆ, ಇಬ್ಬರು ಎಸ್‌ಸಿಗಳು ಮತ್ತು ಮೂವರು ಒಬಿಸಿಗಳು ಸೇರಿದಂತೆ ಹಿಂದುಳಿದ ಸಮುದಾಯಗಳಿಗೆ ಸೇರಿದ ಐವರು ಸಂಸದರಿದ್ದಾರೆ. ಅದರ ಮಿತ್ರಪಕ್ಷ ಜೆಡಿಎಸ್‌ನ ಇಬ್ಬರು ಸಂಸದರಲ್ಲಿ ಓರ್ವರು ಒಕ್ಕಲಿಗರಾಗಿದ್ದರೆ, ಇನ್ನೋರ್ವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಅದು ಒಂದು ಸಂಪುಟ ದರ್ಜೆ ಸಚಿವ ಸ್ಥಾನವನ್ನು ಪಡೆದುಕೊಂಡಿದೆ.

ಆದರೆ ಉತ್ತರ ಕರ್ನಾಟಕದಲ್ಲಿ ಪ್ರಬಲವಾಗಿರುವ ಲಿಂಗಾಯತ ಸಮುದಾಯವು ಕಳೆದ ನಾಲ್ಕು ದಶಕಕ್ಕೂ ಹೆಚ್ಚು ಸಮಯದಿಂದ ಬಿಜೆಪಿಯನ್ನು ಬೆಂಬಲಿಸುತ್ತಿದೆ, ಆದರೆ ಸಂಪುಟದಲ್ಲಿ ಒಂದೇ ಒಂದು ಪ್ರಮುಖ ಹುದ್ದೆ ಅದಕ್ಕೆ ಸಿಕ್ಕಿಲ್ಲ. ಇದು ರಾಜ್ಯದ ಅಗ್ರಗಣ್ಯ ಲಿಂಗಾಯತ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಭಾವವು ಕ್ಷೀಣಿಸುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ.

ಅತ್ಯಂತ ಹಿಂದುಳಿದ ದಲಿತ (ಎಡ) ಗುಂಪಿಗೆ ಸೇರಿದ ಇಬ್ಬರು ಹಿರಿಯ ನಾಯಕರು ಕಾಂಗ್ರೆಸ್‌ನ ಪ್ರಬಲ ಸವಾಲನ್ನು ಮೆಟ್ಟಿ ನಿಂತು ಚುನಾವಣೆಯಲ್ಲಿ ಗೆದ್ದಿದ್ದರೂ ಬಿಜೆಪಿ ಈ ಗುಂಪಿಗೂ ಯಾವುದೇ ಪ್ರಾತಿನಿಧ್ಯವನ್ನು ನೀಡಿಲ್ಲ. ಈ ಗುಂಪು ಸಾಂಪ್ರದಾಯಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಲೇ ಬಂದಿದೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ ಕೇಂದ್ರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದರೆ, ಶೋಭಾ ಕರಂದ್ಲಾಜೆ ರಾಜ್ಯ ಸಚಿವರಾಗಿದ್ದಾರೆ. ಬ್ರಾಹ್ಮಣರಾಗಿರುವ ಪ್ರಹ್ಲಾದ್ ಜೋಶಿ ಸಂಪುಟ ದರ್ಜೆ ಸಚಿವರಾಗಿದ್ದರೆ ಲಿಂಗಾಯತ ವಿ.ಸೋಮಣ್ಣ ರಾಜ್ಯ ಸಚಿವರಾಗಿದ್ದಾರೆ. ಇವರ ಜೊತೆಗೆ ಬ್ರಾಹ್ಮಣರಾಗಿರುವ ಕರ್ನಾಟಕದ ರಾಜ್ಯಸಭಾ ಸದಸ್ಯೆ ನಿರ್ಮಲಾ ಸೀತಾರಾಮನ್ ಅವರು ಸಂಪುಟ ದರ್ಜೆ ಸಚಿವರಾಗುವುದರೊಂದಿಗೆ ಕೇಂದ್ರ ಸಂಪುಟದಲ್ಲಿ ಕರ್ನಾಟಕದಿಂದ ಐವರು ಸಚಿವರಿದ್ದಾರೆ ಮತ್ತು ಇವರೆಲ್ಲರೂ ಪ್ರಬಲ ಜಾತಿಗಳಿಗೆ ಸೆರಿದವರಾಗಿದ್ದಾರೆ.

ಆದರೆ ಏಳನೇ ಬಾರಿಗೆ ಮತ್ತು ಬಿಜೆಪಿ ಟಿಕೆಟ್‌ನಲ್ಲಿ ನಾಲ್ಕನೇ ಬಾರಿಗೆ ಸಂಸದರಾಗಿರುವ ಅತ್ಯಂತ ಹಿಂದುಳಿದ ಎಸ್‌ಸಿ(ಎಡ) ಗುಂಪಿಗೆ ಸೇರಿದ ವಿಜಯಪುರದ ರಮೇಶ್ ಜಿಗಜಿಣಗಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಚಿತ್ರದುರ್ಗ ಎಸ್‌ಸಿ ಮೀಸಲು ಕ್ಷೇತ್ರದಿಂದ ಗೆದ್ದಿರುವ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರೂ ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.

ರಾಜ್ಯದಿಂದ ಸಚಿವರ ಆಯ್ಕೆಯ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಕಳೆದೆರಡು ದಿನಗಳಿಂದ‌ ಬಿಜೆಪಿಯನ್ನು ಟೀಕಿಸುತ್ತಿದ್ದಾರೆ. ದಲಿತರ ಬಗ್ಗೆ ಬಿಜೆಪಿಯ ಕಾಳಜಿ ಹುಸಿಯಾಗಿದೆ ಎನ್ನುವುದಕ್ಕೆ ಕೇಂದ್ರ ಸಂಪುಟವೇ ಸಾಕ್ಷಿ. ರಾಜ್ಯದ ಒಬ್ಬನೇ ಒಬ್ಬ ದಲಿತ ಅಥವಾ ಹಿಂದುಳಿದ ಸಮುದಾಯದ ನಾಯಕನನ್ನು ಕೇಂದ್ರ ಸಂಪುಟದಲ್ಲಿ ಸೇರಿಸಿಕೊಂಡಿಲ್ಲ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಟೀಕಿಸಿದ್ದರು.

ಬಿಜೆಪಿಗೆ ಹಿಂದುಳಿದ ಮತ್ತು ದಲಿತ ಸಮುದಾಯಗಳು ಬೇಕಿಲ್ಲವೆಂಬಂತೆ ಕಾಣುತ್ತಿದೆ. ಅವರ ಪಕ್ಷದಿಂದ ಈ ಸಮುದಾಯಗಳಿಗೆ ಸೇರಿದ ಹಲವರು ಆಯ್ಕೆಯಾಗಿದ್ದಾರೆ. ಅದು ಅವರ ನಿರ್ಣಯ, ಆದರೆ ಈ ಸಮುದಾಯಗಳನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿದೆ ಎಂದು ರಾಜ್ಯದ ಗೃಹಸಚಿವ ಜಿ.ಪರಮೇಶ್ವರ್ ಅವರೂ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News