ಜನರಲ್ಲಿ ದ್ವೇಷ ಮೂಡಿಸಿ ದೇಶ ಒಡೆಯುವುದೇ ಬಿಜೆಪಿ ಆದ್ಯತೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು: ದೇಶದ ಜನ ಸಮುದಾಯದಲ್ಲಿ ಅಲ್ಪಸಂಖ್ಯಾತರ ಬಗ್ಗೆ ದ್ವೇಷ ಮೂಡಿಸಿ, ದೇಶ ಒಡೆಯುವುದೇ ಬಿಜೆಪಿಯವರ ಆದ್ಯತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಇಂದಿರಾಗಾಂಧಿ ಭವನದಲ್ಲಿ ನಡೆದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹತ್ತು ವರ್ಷಗಳ ಅವಧಿಯಲ್ಲಿ ಬಡವರ ಏಳಿಗೆಗಾಗಿ ಒಂದೊಳ್ಳೆ ರಾಷ್ಟ್ರೀಯ ಯೋಜನೆಯನ್ನು ನೀಡಲಾಗಿಲ್ಲ. ಬಡವರನ್ನು ಮತ್ತಷ್ಟು ಕೆಟ್ಟ ಪರಿಸ್ಥಿತಿಗೆ ತಳ್ಳಲಾಗುತ್ತಿದೆ. ಅಲ್ಪಸಂಖ್ಯಾತರ ಬಗ್ಗೆ ದ್ವೇಷ ಮೂಡಿಸಿ ದೇಶ ಒಡೆಯುವುದನ್ನೆ ಆದ್ಯತೆ ಎಂದುಕೊಂಡಿರುವ ಬಿಜೆಪಿಯವರು ಇನ್ನೆಷ್ಟು ದಿನ ಅಧಿಕಾರದಲ್ಲಿರಬೇಕು. ಇಂತವರಿಗೆ ಪಾಠ ಕಲಿಸಲು 2024ರ ಲೋಕಸಭಾ ಚುನಾವಣೆ ಪ್ರಸ್ತುತವಾಗಿದೆ ಎಂದರು.
ದೇಶದ ರಾಜಕಾರಣ ಕವಲುದಾರಿಯಲ್ಲಿದೆ. ಸ್ವಾತಂತ್ರ್ಯ ಬಂದ ನಂತರ ರಾಜಕೀಯ ಇಂತಹ ಹಾದಿಗೆ ಹೋಗಿರಲಿಲ್ಲ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿಯೂ ಇಷ್ಟೊಂದು ಕೆಟ್ಟ ಪರಿಸ್ಥಿತಿಗೆ ಹೋಗಿರಲಿಲ್ಲ. ಆದರೆ, ಪ್ರಸ್ತುತ ದೇಶದ ರಾಜಕಾರಣ ವಿಭಜನೆಯ ರಾಜಕಾರಣವಾಗುತ್ತಿದೆ ಎಂದು ಪರಮೇಶ್ವರ್ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ‘ಪ್ರಪಂಚದ ಯಾವುದೇ ದೇಶದಲ್ಲಿ ಇಲ್ಲದ ಸಂವಿಧಾನವನ್ನು ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಅವರು ನೀಡಿದ ಸಂವಿಧಾನದಿಂದ ನಾನು ಪ್ರಧಾನ ಮಂತ್ರಿಯಾಗಿದ್ದೇನೆ' ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೋದಿ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪರಮೇಶ್ವರ್ ಆರೋಪಿಸಿದರು.
ದೇಶದಲ್ಲಿ ರಾಜಕೀಯ ವಾತಾವರಣ ಬದಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಆತ್ಮವಿಶ್ವಾಸವಿದೆ. ಬಿಜೆಪಿಗೆ ಬುದ್ಧಿ ಕಲಿಸಬೇಕು ಎಂದು ಜನ ಕಾಯುತ್ತಿದ್ದಾರೆ. ಕಳೆದ ಹತ್ತು ವರ್ಷದಿಂದ ನಮಗೆ ಏನು ಒಳ್ಳೆಯದಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. 28 ಕ್ಷೇತ್ರಗಳ ಪೈಕಿ ಕನಿಷ್ಟ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
2023ರಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ರಾಜ್ಯ ಪ್ರವಾಸ ಮಾಡಿದರು. ಭ್ರಷ್ಟಾಚಾರ ಬಿರುದು ಪಡೆದಿದ್ದ ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರಕ್ಕೆ ಬರಬಾರದು ಎಂಬ ಉದ್ದೇಶದಿಂದ ಪ್ರತಿ ಹಳ್ಳಿಯನ್ನು ಸುತ್ತಿದರು. ಬಡವರ ಪರವಾಗಿ ಕಾಂಗ್ರೆಸ್ ಪಕ್ಷ ಎಂದಿಗೂ ನಿಂತಿದೆ. ಬಡವರಿಗಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ಪರಮೇಶ್ವರ್ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಚಂದ್ರಪ್ಪ, ಸಲೀಂ ಅಹ್ಮದ್, ಸಚಿವರಾದ ಕೆ.ಜೆ.ಜಾರ್ಜ್, ಲಕ್ಷ್ಮೀ ಹೆಬ್ಬಾಳ್ಕರ್, ಮಧು ಬಂಗಾರಪ್ಪ, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಸೇರಿದಂತೆ ಹಲವರು ಇದ್ದರು.
ಕನಿಷ್ಠ 20 ಸ್ಥಾನ ಗೆಲ್ಲುವ ವಿಶ್ವಾಸವಿದೆ: ಜಯಪ್ರಕಾಶ್ ಹೆಗ್ಡೆ, ಕುಮಾರಸ್ವಾಮಿ, ಸುಕುಮಾರ ಶೆಟ್ಟಿಯವರಂತಹ ಜನನಾಯಕರು ಕಾಂಗ್ರೆಸ್ ಸೇರುತ್ತಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಪಕ್ಷವನ್ನು ಸದೃಢವಾಗಿಸಿಕೊಂಡು ಚುನಾವಣೆಯನ್ನು ಎದುರಿಸಬೇಕು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತೇವೆ ಎನ್ನುವ ವಿಶ್ವಾಸ ನನಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.