ಕಾಂತರಾಜು ವರದಿ ಜಾರಿಮಾಡಲು ಸಿಎಂ ಸಿದ್ದರಾಮಯ್ಯ ಮೀನಮೇಷ ಎಣಿಸುತ್ತಿದ್ದಾರೆ : ಬಿ.ಕೆ.ಹರಿಪ್ರಸಾದ್

Update: 2024-10-06 10:46 GMT

ಬೆಂಗಳೂರು : "ನೂರಾರು ಕೋಟಿ ರೂ. ಹಣ ಖರ್ಚು ಮಾಡಿ, ದಲಿತ ಹಿಂದುಳಿದ ಸಮುದಾಯಗಳ ಏಳಿಗೆಗಾಗಿ ಸಿದ್ದ ಪಡಿಸಿರುವ ಕಾಂತರಾಜು ವರದಿ ಅನುಷ್ಠಾನಕ್ಕೆ ತರುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮೀನಮೇಷ ಎಣಿಸುತ್ತಿದೆ" ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬೇಸರ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಲೇಖಕ ಕೆ.ಎನ್.ಲಿಂಗಪ್ಪ ರಚಿಸಿರುವ ‘ಮೀಸಲಾತಿಯ ಒಳಮುಖ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ʼವಿಪಕ್ಷ ನಾಯಕ ರಾಹುಲ್‌ಗಾಂಧಿ ಕೊಲ್ಹಾಪುರದಲ್ಲಿ ಮಾತನಾಡುತ್ತಾ ದೇಶದಲ್ಲಿ ಕಾಂಗ್ರೆಸ್ ಶೇ.75ರಷ್ಟು ಮೀಸಲಾತಿ ಕೊಡುತ್ತೇವೆ ಮತ್ತು ಮೀಸಲಾತಿಯಲ್ಲಿ ಶೇ.50ರಷ್ಟು ಇರುವ ಮಿತಿಯನ್ನು ಶೇ.70ಕ್ಕೆ ತೆಗೆದುಕೊಂಡು ಹೋಗುತ್ತೇವೆ. ಕಡಾ ಖಂಡಿತವಾಗಿ ಜನಗಣತಿ ಮತ್ತು ಜಾತಿಗಣತಿ ಎರಡೂ ಆಗಬೇಕೆಂದು ಹೇಳುತ್ತಿದ್ದಾರೆ. ಆದರೆ ನಾವಿಲ್ಲಿ ಮೀನಾಮೇಷ ಎಣಿಸುತ್ತಿದ್ದೇವೆʼ ಎಂದು ಲೇವಡಿ ಮಾಡಿದರು.

ʼಸರಕಾರ ಹೋದರೂ ಚಿಂತೆಯಿಲ್ಲ. ಜಾತಿಗಣತಿ ಮತ್ತು ಜನ ಗಣತಿ ಎರಡು ಆಗಲೇಬೇಕು. ಮೀಸಲಾತಿ ಅನುಷ್ಠಾನ ತರಲೇ ಬೇಕು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ತೆಗೆದುಕೊಂಡಿದ್ದಂತಹ ಗಟ್ಟಿ ತೀರ್ಮಾನವನ್ನು ಸಿದ್ದರಾಮಯ್ಯ ಮತ್ತು ಸರಕಾರ ತೆಗೆದುಕೊಳ್ಳಬೇಕು. ಯಾರೇ ಅಧಿಕಾರದಲ್ಲಿದ್ದರೂ, ದುರ್ಬಲ ಸಮುದಾಯಗಳಿಗಾಗಿ ಮಾಡಿರುವ ಕಾಂತರಾಜು ವರದಿಯನ್ನು ಜಾರಿಗೆ ತಂದರೆ, ರಾಜ್ಯದ ಜನತೆಗೆ ಬಹಳ ಅನುಕೂಲವಾಗುತ್ತದೆʼ ಎಂದು ಹರಿಪ್ರಸಾದ್ ತಿಳಿಸಿದರು.

ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ. 197 ವರ್ಗದವರಲ್ಲಿ ಕೇವಲ 10 ಸಮುದಾಯದವರಿಗೆ ಮಾತ್ರ ಅವಕಾಶಗಳು ಸಿಕ್ಕಿರಬಹುದು. ಆದರೆ ಉಳಿದ 187 ವರ್ಗಗಳಿಗೆ ಇಲ್ಲಿಯವರೆಗೂ ಸರಕಾರಿ ನೌಕರಿಗಳೇ ಸಿಕ್ಕಿಲ್ಲ. ಒಳಮೀಸಲಾತಿ ಜಾರಿ ಮಾಡಿಲ್ಲವೆಂದರೆ ಸಂವಿಧಾನದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದಂತಾಗುತ್ತದೆ ಎಂದರು.

ಮೀಸಲಾತಿ ಜಾರಿಯಾದರೆ ದಕ್ಷತೆ, ಪ್ರತಿಭೆ ಇರುವುದಿಲ್ಲ. ಸರಕಾರಿ ಕೆಲಸಗಳು ಮಾಡುವುದಕ್ಕೆ ಬಹಳ ಕಷ್ಟ ಎಂದು ಕೆಲವರು ಹೇಳುತ್ತಾರೆ. ಮೀಸಲಾತಿ ಹೆಚ್ಚು ಜಾರಿ ಮಾಡಿರುವ ರಾಜ್ಯಗಳ ಪೈಕಿ ತಮಿಳುನಾಡು ಒಂದಾಗಿದೆ. ಇಡೀ ದೇಶಕ್ಕೆ ಮಾದರಿಯಾದ ರಾಜ್ಯ ಎಂದರೆ ತಮಿಳುನಾಡು ಎಂದು ಹೇಳಬಹುದು. ಅಲ್ಲಿನ ಜನರಿಗೆ ಕೈ ತುಂಭಾ ಕೆಲಸ, ಹೊಟ್ಟೆ ತುಂಬಾ ಊಟ ಇದೆ. ಮೀಸಲಾತಿ ಹೆಚ್ಚಾದರೆ ಅರ್ಹತೆ ಇಲ್ಲ ಎನ್ನುವುದಾದರೆ ತಮಿಳುನಾಡು ರೋಗಗ್ರಸ್ಥ ರಾಜ್ಯ ಆಗಬೇಕಿತ್ತು. ಕಡಿಮೆ ಮೀಸಲಾತಿ ಇರುವಂತಹ ಬಿಹಾರ್, ಮದ್ಯಪ್ರದೇಶ, ಉತ್ತರಪ್ರದೇಶ ಇಂದು ಅಭಿವೃದ್ಧಿಯ ರಾಜ್ಯವಾಗಬೇಕಿತ್ತು ಎಂದು ನುಡಿದರು.

ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಪಟ್ಟಿರುವ ಸಮುದಾಯಗಳಿಗೆ ಸಮಾನವಾದ ಅವಕಾಶಗಳನ್ನು ಕಲ್ಪಿಸಿಕೊಡಬೇಕೆನ್ನುವುದೇ ಸಂವಿಧಾನ ಮೀಸಲಾತಿಯ ಆಶಯ. ಆದ್ದರಿಂದಲೇ ಸಂವಿಧಾನ ಒಂದು ಪವಿತ್ರವಾದ ಗ್ರಂಥ. ಸಾಮಾಜಿಕ ನ್ಯಾಯದ ವಿಚಾರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಬ್ರಿಟೀಷರ ಕೊಡುಗೆ ಅಪಾರ. ಬ್ರಿಟಿಷರು ಬಾರದೆ ಇದ್ದಿದ್ದರೆ ನಾವೆಲ್ಲರೂ ಶಿಕ್ಷಣದಿಂದ ವಂಚಿತರಾಗುತ್ತಿದ್ದೆವು ಎಂದರು.

ಕಾರ್ಯಕ್ರಮದಲ್ಲಿ ಲೇಖಕ ಕೆ.ಎನ್.ಲಿಂಗಪ್ಪ, ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ, ಪ್ರಾಧ್ಯಾಪಕ ಡಾ.ಎ.ನಾರಾಯಣ, ಪರಿಷತ್ ಸದಸ್ಯ ಡಿ.ಟಿ.ಶ್ರೀನಿವಾಸ್, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News