5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ: ಮೇಲ್ಮನವಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ ವಿಭಾಗೀಯ ಪೀಠ

Update: 2024-03-18 14:48 GMT

ಬೆಂಗಳೂರು: 5,8,9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಸುತ್ತೋಲೆ ರದ್ದು ಕೋರಿ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯನ್ನು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ. 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳನ್ನು ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ಏಕಸದಸ್ಯ ಪೀಠ ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ರಾಜೇಶ್ ಕೆ.ರೈ ಅವರಿದ್ದ ನ್ಯಾಯಪೀಠ, ತೀರ್ಪನ್ನು ಕಾಯ್ದಿರಿಸಿದೆ. ಶೀಘ್ರದಲ್ಲೇ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು, ರಾಜ್ಯ ಪಠ್ಯಕ್ರಮ ಅಳವಡಿಸಿರುವ ಎಲ್ಲ ಮಕ್ಕಳಿಗೂ ಸಮಾನ ಶಿಕ್ಷಣ ವ್ಯವಸ್ಥೆ ಬೇಕಾಗಿದೆ. ಆದ್ದರಿಂದ ಶಿಕ್ಷಣ ಇಲಾಖೆ ಬೋರ್ಡ್ ಪರೀಕ್ಷೆಗೆ ಮುಂದಾಗಿದೆ. ಅಲ್ಲದೇ, ಪರೀಕ್ಷೆಗಳು ತಮಾಷೆಯಲ್ಲ. ಮಕ್ಕಳು ಹಲವು ದಿನಗಳಿಂದ ಸಿದ್ದತೆ ಮಾಡಿಕೊಂಡಿರುತ್ತಾರೆ. ಆದರೆ, ಪರೀಕ್ಷಾ ದಿನಾಂಕಗಳನ್ನು ಮತ್ತೆ ಮತ್ತೆ ಬದಲಾವಣೆ ಮಾಡುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ಗೊಂದಲ ಆಗುತ್ತಿದೆ. ರಾಜ್ಯ ಶಿಕ್ಷಣ ಇಲಾಖೆಗೆ ಆರ್​​ಟಿಐ ಕಾಯಿದೆಯಡಿ ಪರೀಕ್ಷೆಗಳನ್ನು ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕಳೆದ ವರ್ಷವೂ ಆರ್​ಟಿಐ ಕಾಯಿದೆಯಡಿ ಸುತ್ತೋಲೆ ಹೊರಡಿಸಿ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಶಿಕ್ಷಣ ಇಲಾಖೆ ಸಮವರ್ತಿ ಪಟ್ಟಿಗೆ ಸೇರಿದ್ದು, ಈ ಸಂಬಂಧ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅವಕಾಶವಿದೆ ಎಂದು ಕೋರ್ಟ್ ಮನವರಿಕೆ ಮಾಡಿಕೊಟ್ಟಿರು.ಅರ್ಜಿದಾರರ ಪರ ವಕೀಲರು ರಾಜ್ಯ ಸರ್ಕಾರವು ಬೋರ್ಡ್ ಪರೀಕ್ಷೆಗಳನ್ನು ನಡೆಸುವುದಕ್ಕೆ ಮುಂದಾಗಿರುವುದು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಗೆ ತದ್ವಿರುದ್ಧವಾಗಿದೆ. ಈ ರೀತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಕಾನೂನುಬಾಹಿರ'' ಎಂದು ವಿವರಿಸಿದ್ದರು. ವಾದ ಪ್ರತಿವಾದ ಆಲಿಸಿದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News