ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ; ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ: ಮಧು ಬಂಗಾರಪ್ಪ
ಶಿವಮೊಗ್ಗ: ಬೆಂಗಳೂರಿನ ಕೆಲವು ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಬಾಂಬ್ ಬೆದರಿಕೆ ವಿಚಾರದ ಬಗ್ಗೆ ಮಾಧ್ಯಮದಲ್ಲಿ ಬರುತ್ತಿದೆ. ನನಗೂ ಈ ಬಗ್ಗೆ ಮಾಹಿತಿ ಬಂದಿದೆ. ಈ ಹಿಂದೆ ಯಾವುದೋ ಒಂದು ಶಾಲೆಗೆ ಬೆದರಿಕೆ ಕರೆ ಇಲ್ಲವೇ ಸಂದೇಶ ಬರುತ್ತಿತ್ತು. ಈಗ ಒಂದೇ ಬಾರಿಗೆ ಹಲವು ಶಾಲೆಗಳಿಗೆ ಸಂದೇಶ ಕಳುಹಿಸಲಾಗಿದೆ. ನಮಗೆ ಮಕ್ಕಳ ಸುರಕ್ಷತೆ ಮುಖ್ಯ. ಆದ್ದರಿಂದ ಈ ಬೆದರಿಕೆ ಸಂದೇಶವನ್ನು ನಿರ್ಲಕ್ಷಿಸಿಲ್ಲ. ಬೆಂಗಳೂರು ಪೊಲೀಸರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದರು.
ಶಾಲೆಗಳಿಗೆ ರಕ್ಷಣೆ ಕೊಡುವ ಬಗ್ಗೆ ಮಾತನಾಡಿದ್ದೇವೆ. ಘಟನೆಯನ್ನು ಹಗುರವಾಗಿ ತಗೆದುಕೊಳ್ಳುವ ಮಾತಿಲ್ಲ. ವಿಶ್ವಾಸ ಇಟ್ಟುಕೊಳ್ಳಲಿ. ಯಾರು ಈ ಇ ಮೇಲ್ ಕಳುಹಿಸಿದ್ದಾರೋ ಅವರನ್ನು ಬಿಡುವ ಪ್ರಶ್ನೆಯಿಲ್ಲ. ಪೋಷಕರು ಧೈರ್ಯವಾಗಿರಬೇಕು. ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಶೀಘ್ರ ಆರೋಪಿಗಳನ್ನು ಪೊಲೀಸರು ಬಂಧಿಸಲಿದ್ದಾರೆ ಎಂದರು.
ಮಕ್ಕಳಿಗೆ ಶಾಲೆಗಳಿಗೆ ರಕ್ಷಣೆ ನೀಡುವುದು ನಮ್ಮ ಜವಾಬ್ದಾರಿ. ಡಿಸಿಎಂ ಅವರು ಸಹ ಶಾಲೆಗೆ ಭೇಟಿ ನೀಡಲಿದ್ದಾರೆ. ನಾನು ಸಂಜೆ ಬೆಂಗಳೂರಿಗೆ ಹೋಗುತ್ತೇನೆ. ಈಗಾಗಲೇ ಅಧಿಕಾರಿಗಳ ಜೊತೆ ಮಾಹಿತಿ ತೆಗೆದುಕೊಂಡಿದ್ದೇನೆ. ಯಾರು ಇದನ್ನು ಮಾಡಿದ್ದಾರೆಂದು ಪತ್ತೆ ಹಚ್ಚುತ್ತೇವೆ. ಗೃಹ ಸಚಿವರು ಸಹ ಕರ್ತವ್ಯ ಮಾಡುತ್ತಿದ್ದಾರೆ. ಅವರ ಜೊತೆ ನಾನು ನಿಕಟ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.