‘ಗ್ಯಾರಂಟಿ’ ಗದ್ದಲಕ್ಕೆ ಉಭಯ ಸದನಗಳ ದಿನದ ಕಲಾಪ ಬಲಿ

Update: 2023-07-04 13:26 GMT

ಬೆಂಗಳೂರು, ಜು. 4: ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯದ ಜನತೆಗೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಅನುಷ್ಟಾನದಲ್ಲಿನ ಗೊಂದಲ ವಿಚಾರದ ಪ್ರಸ್ತಾಪಕ್ಕೆ ಬಿಜೆಪಿ ಸದಸ್ಯರು ವಿಧಾನಮಂಡಲ ಉಭಯ ಸದನಗಳಲ್ಲಿ ಪಟ್ಟು ಹಿಡಿದಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಗದ್ದಲಕ್ಕೆ ಮಂಗಳವಾರದ ಕಲಾಪವು ಬಲಿಯಾಯಿತು.

ರಾಜ್ಯಪಾಲರ ಭಾಷಣದ ಮರುದಿನವೇ ಉಭಯ ಸದನಗಳಲ್ಲಿ ವಿಪಕ್ಷ ಬಿಜೆಪಿ ಸದಸ್ಯರು, ‘ಐದು ಗ್ಯಾರಂಟಿ ಅನುಷ್ಟಾನಗೊಳಿಸದ ಕಾಂಗ್ರೆಸ್ ಪಕ್ಷದ ನೇತೃತ್ವದ ಸರಕಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಜ್ಯದ ಜನತೆಗೆ ಈ ಸರಕಾರ ದೋಖಾ ಮಾಡಿದೆ. ಕೂಡಲೇ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

ಮಂಗಳವಾರ ಬೆಳಗ್ಗೆ 11ಗಂಟೆಯ ಸುಮಾರಿಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್, ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಆಡಳಿತ ಪಕ್ಷದ ಸದಸ್ಯ ಶಿವಲಿಂಗೇಗೌಡ ಅವರಿಗೆ ಪ್ರಶ್ನೆ ಕೇಳಲು ಆಹ್ವಾನಿಸಿದರು. ಅವರ ಪ್ರಶ್ನೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಲು ಮುಂದಾಗುತ್ತಿದ್ದಂತೆಯೇ ಮಧ್ಯಪ್ರವೇಶಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಸದಸ್ಯ ಸುನೀಲ್ ಕುಮಾರ್, ‘ಕಾಂಗ್ರೆಸ್ ಪಕ್ಷ ನೀಡಿರುವ ಗ್ಯಾರಂಟಿಗಳ ವಿಚಾರದಲ್ಲಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು’ ಎಂದು ಕೋರಿ ನಿಲುವಳಿ ಸೂಚನೆ ನೋಟಿಸ್ ನೀಡಿದ್ದೇವೆ. ಆ ವಿಚಾರ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ‘ಈಗಾಗಲೇ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡಿದ್ದು, ಸಚಿವರು ಪ್ರಶ್ನೆಗೆ ಉತ್ತರ ನೀಡುತ್ತಿದ್ದಾರೆ. ಈ ಹಂತದಲ್ಲಿ ಚರ್ಚೆಗೆ ಅವಕಾಶ ನೀಡಲು ಬರುವುದಿಲ್ಲ. ಪ್ರಶ್ನೋತ್ತರ, ಶೂನ್ಯವೇಳೆ ಮುಗಿದ ನಂತರ ತಮ್ಮ ವಿಚಾರ ಪ್ರಸ್ತಾಪಕ್ಕೆ ಅವಕಾಶ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಆದರೆ, ಸ್ಪೀಕರ್ ಸಲಹೆಗೆ ಸಮಾಧಾನಗೊಳ್ಳದ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸದಸ್ಯರು, ‘ಪ್ರಶ್ನೋತ್ತರ ಮುಂದೂಡಿ, ನಾವು ಪ್ರಸ್ತಾಪಿಸಿರುವ ವಿಚಾರದ ಚರ್ಚೆಗೆ ಅವಕಾಶ ಕೊಡಬೇಕೆಂದು ಪಟ್ಟು ಹಿಡಿದರು. ಆಗ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲು ಬಿಜೆಪಿ ಸದಸ್ಯರು ಉತ್ಸಾಹದಲ್ಲಿದ್ದಾರೆ. ಅವರ ನುಡಿಮುತ್ತುಗಳನ್ನು ಕೇಳಲು ನಾವು ಕಾತರರಾಗಿದ್ದೇವೆ. ಐದು ಗ್ಯಾರಂಟಿಗಳನ್ನು ನೀಡಿರುವುದು ಅವರಿಂದ ತಡೆದುಕೊಳ್ಳಲು ಆಗುತ್ತಿಲ್ಲ. 45 ದಿನಗಳಿಂದ ಅವರು ಸಂಕಟ ಅನುಭವಿಸುತ್ತಿದ್ದಾರೆ. ಪ್ರಶ್ನೋತ್ತರ ಕಲಾಪದ ನಂತರ ಚರ್ಚೆಗೆ ಅವಕಾಶ ಕೊಡಿ’ ಎಂದು ಕಾಲೆಳೆದರು.

ಬಳಿಕ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ಉಚಿತ, ನಿಶ್ಚಿತ, ಖಚಿತಗಳ ಬಗ್ಗೆ ಚರ್ಚೆ ಆಗಲೇಬೇಕು. ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದರು. ಈಮಧ್ಯೆ ಎದ್ದು ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಪ್ರತಿಪಕ್ಷದ ಸದಸ್ಯರು ನೀಡಿರುವ ನೋಟಿಸ್ ಅನ್ನು ಓದಲಾರಂಭಿಸಿದರು. ನಿಯಮ 60ರ ಮೇರೆಗೆ ನಿಲುವಳಿ ಸೂಚನೆಯಡಿ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ನಂತರ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಅವರೇ ಕೇಳಿದ್ದಾರೆ. ಪ್ರಶ್ನೋತ್ತರ ನಂತರ ಚರ್ಚೆ ಮಾಡಬಹುದು. ಮೊಂಡಾಟ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಮೊಂಡಾಟ ಎಂಬ ಪದವನ್ನು ಆಡಿದ್ದು ಸಿದ್ದರಾಮಯ್ಯರಿಗೆ ಶೋಭೆ ತರುವುದಿಲ್ಲ. ಈ ಪದವನ್ನು ಕಡತದಿಂದ ತೆಗೆಸಬೇಕೆಂದು ಒತ್ತಾಯಿಸಿದರು. ಈ ವೇಳೆ ಬಿಜೆಪಿಯ ಡಾ.ಅಶ್ವತ್ಥನಾರಾಯಣ, ಸಿದ್ದರಾಮಯ್ಯ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು.

‘ನಾನು 5 ವರ್ಷ ಪ್ರತಿಪಕ್ಷದ ನಾಯಕನಾಗಿ ಕೆಲಸ ಮಾಡಿದ್ದೇನೆ. ಪ್ರಶ್ನೋತ್ತರಕ್ಕೂ ಮುನ್ನ ನಿಲುವಳಿ ಸೂಚನೆ ಕುರಿತು ಚರ್ಚೆಗೆ ಹಿಂದಿನ ಸ್ಪೀಕರ್ ಎಂದು ಅವಕಾಶ ಕೊಟ್ಟಿಲ್ಲ. ಆ ರೀತಿ ಏನಾದರೂ ಆಗಿರುವ ಒಂದು ನಿದರ್ಶನ ತೋರಿಸಲಿ, ನಾನು ಈ ಬಗ್ಗೆ ಮಾತನಾಡುವುದಿಲ್ಲ. ಹಿಂದಿನ ಸ್ಪೀಕರ್ ನಾವು ಕೊಟ್ಟ ನಿಲುವಳಿ ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಸಮಯ ನಿಗದಿಪಡಿಸಿದ್ದಾರೆ’ ಎಂದು ಸಿದ್ದರಾಮಯ್ಯ ಉಲ್ಲೇಖಿಸಿದರು.

ಈ ನಡುವೆ ಮಧ್ಯಪ್ರವೇಶಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಕ್ರಿಯಾಲೋಪ ಎತ್ತಲು ಮುಂದಾದರು. ಆ ವೇಳೆಗೆ ಬಿಜೆಪಿ ಸದಸ್ಯರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ನಡೆಸಿದರು. ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರು ಘೋಷಣೆ ಮೊಳಗಿಸಿದರು. ಹೀಗಾಗಿ ಸದನದಲ್ಲಿ ಗದ್ದಲ, ಕೋಲಾಹಲ ಸೃಷ್ಟಿಯಾಯಿತು.

 

ನಂತರ ಸ್ಪೀಕರ್ ಯು.ಟಿ.ಖಾದರ್, ‘ಬಿಜೆಪಿ ಸದಸ್ಯರ ಧೋರಣೆ ಸರಿಯಲ್ಲ, ಇದು ಅನುಚಿತ ವರ್ತನೆ, ಜನ ನೋಡುತ್ತಿದ್ದಾರೆ. ನಿಮ್ಮ ನೋಟಿಸ್‍ನಲ್ಲೆ ಪ್ರಶ್ನೋತ್ತರ ನಂತರ ನಿಲುವಳಿ ಸೂಚನೆಗೆ ಅವಕಾಶ ಕೊಡಿ ಎಂಬುದಾಗಿ ಸ್ಪಷ್ಟವಾಗಿ ತಿಳಿಸಲಾಗಿದೆ. ಈ ರೀತಿ ಧರಣಿ ಮಾಡುವುದು ಸಲ್ಲ. ಕೂಡಲೇ ತಮ್ಮ-ತಮ್ಮ ಸ್ಥಾನಗಳಿಗೆ ಹಿಂದಿರುಗಬೇಕು ಎಂದು ಸೂಚಿಸಿದರು. ಗದ್ದಲ ಹೆಚ್ಚಾಗಿದ್ದರಿಂದ ಸ್ಪೀಕರ್ ಕಲಾಪವನ್ನು 15 ನಿಮಿಷ ಕಾಲ ಮುಂದೂಡಿದರು. ಬಳಿಕ ಸದನ ಸೇರಿದಾಗ ಗದ್ದಲದ ಮಧ್ಯೆ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ಕಲಾಪ ಮುಗಿಸಿ, ಸದನವನ್ನು ಮಧ್ಯಾಹ್ನದ ಭೋಜನಕ್ಕೆ ಸ್ಪೀಕರ್ ಮುಂದೂಡಿದರು.

ಭೋಜನ ವಿರಾಮದ ಬಳಿಕವು ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿದರು. ‘ಗ್ಯಾರಂಟಿ ಅನುಷ್ಠಾನದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು. ಈ ಸರಕಾರ ಗ್ಯಾರಂಟಿ ಜಾರಿ ಬಗ್ಗೆ ಯಾವ ರೀತಿ ಮಹಿಳೆಯರಿಗೆ, ಗೃಹಿಣಿಯರಿಗೆ, ವಿದ್ಯಾರ್ಥಿಗಳಿಗೆ ಮೋಸ ಮಾಡಿದೆ ಎಂಬುದರ ಬಗ್ಗೆ ಚರ್ಚೆ ನಡೆಸಬೇಕೆಂದು ನಿಲುವಳಿ ಸೂಚನೆ ನೀಡಿದ್ದೇವೆ. ಮೊದಲು ಷರತ್ತು ಇಲ್ಲದೆ ಗ್ಯಾರಂಟಿ ಜಾರಿ ಎಂದಿದ್ದರು. ಈಗ ಪ್ರತಿಯೊಂದಕ್ಕೂ ಶರತ್ತು ಹಾಕಿ ಜನರಿಗೆ ಮೋಸ ಮಾಡಿದ್ದಾರೆ. ಈ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು’ ಎಂದು ಬಸವರಾಜ ಬೊಮ್ಮಾಯಿ ಪಟ್ಟು ಹಿಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ‘ಒಂದು ದಿನಕ್ಕೆ ಒಂದು ನಿಲುವಳಿ ಸೂಚನೆ ಮಾತ್ರ ಚರ್ಚೆ ಮಾಡಬಹುದು. ನಿಮಗಿಂತ ಮುಂಚಿತವಾಗಿ ನೋಟಿಸ್ ನೀಡಿದ್ದ ಜೆಡಿಎಸ್‍ನವರಿಗೆ ರೈತರ ಬಗ್ಗೆ ಚರ್ಚೆ ಮಾಡಲು ನಿಲುವಳಿಯನ್ನು ನಿಯಮ 69ಕ್ಕೆ ಪರಿವರ್ತಿಸಿ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಿಮಗೂ ಚರ್ಚೆಗೆ ಅವಕಾಶ ನೀಡುತ್ತೇನೆ. ನೀವು ಧರಣಿ ಕೈಬಿಟ್ಟು ತಮ್ಮ ತಮ್ಮ ಆಸನಕ್ಕೆ ಬನ್ನಿ’ ಎಂದು ಮನವಿ ಮಾಡಿದರು.

ಆದರೂ, ತಮ್ಮ ಪಟ್ಟು ಸಡಿಲಿಸದ ಬಿಜೆಪಿ ಸದಸ್ಯರು, ಸರಕಾರ ಪ್ರತಿಷ್ಠೆಗೆ ಬಿದ್ದಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರತಿಷ್ಠೆ ನಮ್ಮದಲ್ಲ, ಇವರದ್ದೇ ಎಂದರು. ರಾಜ್ಯಪಾಲರ ಭಾಷಣದ ಮೇಲೆ ಆಕಾಶದ ತನಕ ಮಾತನಾಡಿ ನಿಮಗೆ ಅವಕಾಶವಿದೆ ಎಂದರು.

ಗ್ಯಾರಂಟಿ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದಾರೆ. ಇನ್ನೊಂದೆಡೆ, ಮೊದಲು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಪ್ರಾರಂಭಿಸೋಣ. ನಿಯಮಾವಳಿಗಳನ್ನು ಬಿಟ್ಟು ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ಸಂಪ್ರದಾಯ ಮುರಿದಂತಾಗುತ್ತದೆ ಎಂದು ಸ್ಪೀಕರ್ ಮನವೊಲಿಕೆಗೆ ಯತ್ನಿಸಿದರು.

ಈ ಸಂದರ್ಭದಲ್ಲಿ ಎದ್ದು ನಿಂತ ಗೃಹ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯಪಾಲರ ಭಾಷಣದಲ್ಲೆ ಈ ಎಲ್ಲ ಅಂಶಗಳು ಇವೆ. ಚರ್ಚೆಯಲ್ಲಿ ಭಾಗವಹಿಸಿ ವಿವರವಾಗಿ ಎಲ್ಲ ವಿಷಯಗಳನ್ನು ಮುಂದಿಡಲಿ ಎಂದು ಸಲಹೆ ನೀಡಿದರು.

ಎಲ್ಲವೂ ನಿಯಮಾವಳಿಗಳ ಪ್ರಕಾರವೆ ನಡೆಯಬೇಕು ಎಂದು ಹೇಳುತ್ತಿರುವ ತಾವು(ಸ್ಪೀಕರ್), ನಾವು ಧರಣಿಯಲ್ಲಿ ಇರುವಾಗಲೆ ಪ್ರಶ್ನೋತ್ತರ, ಶೂನ್ಯವೇಳೆ, ವರದಿಗಳನ್ನು ಒಪ್ಪಿಸುವುದನ್ನು ಮಾಡಿದ್ದೀರಾ ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನಾನು ‘ಪ್ರತಿಪಕ್ಷದ ಮಿತ್ರ’. ನಿಮಗೆ ಎಲ್ಲ ಅವಕಾಶಗಳನ್ನು ನೀಡುತ್ತೇನೆ. ನಿಲುವಳಿಯನ್ನು ನಿಯಮ 69ಕ್ಕೆ ಪರಿವರ್ತಿಸಿ ಚರ್ಚೆಗೆ ಅವಕಾಶ ನೀಡುತ್ತೇನೆ. ಮೊದಲು ಜೆಡಿಎಸ್‍ನವರು ಚರ್ಚೆ ಮಾಡಲಿ. ನಿಯಮಾವಳಿಗಳನ್ನು ಮೀರಿ ಹೋಗುವುದು ಬೇಡ ಎಂದರು.

ಈ ವೇಳೆ ಸದನದಲ್ಲ ಮತ್ತೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಹಾಗೂ ಸದನವನ್ನು 10 ನಿಮಿಷಗಳ ಕಾಲ ಸ್ಪೀಕರ್ ಮುಂದೂಡಿದರು. ಪುನಃ ಸದನ ಸೇರಿದಾಗಲೂ ಬಿಜೆಪಿ ಸದಸ್ಯರ ಧರಣಿ ನಡುವೆಯೆ ಸ್ಪೀಕರ್ ಸೂಚನೆಯಂತೆ ಕಾಂಗ್ರೆಸ್ ಹಿರಿಯ ಸದಸ್ಯ ಟಿ.ಬಿ.ಜಯಚಂದ್ರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಪ್ರಸ್ತಾವ ಮಂಡಿಸಿದರು. ಬೇಳೂರು ಗೋಪಾಲಕೃಷ್ಣ ಅನುಮೋದಿಸಿದರು.

ಟಿ.ಬಿ.ಜಯಚಂದ್ರ ಮಾತನಾಡಲು ಮುಂದಾಗುತ್ತಿದ್ದಂತೆ ಬಿಜೆಪಿ ಸದಸ್ಯರು ‘ಮೋಸ ಮೋಸ’ ಎಂದು ಘೋಷಣೆಗಳನ್ನು ಕೂಗಿದರು. ಅಲ್ಲದೆ, ನಿಲುವಳಿ ಸೂಚನೆಯ ಮೇಲಿನ ಚರ್ಚೆಗೆ ಅವಕಾಶ ನೀಡಿ. ಸರಕಾರದ ಹೊಗಳಿಕೆಯ ಭಾಷಣದ ಅಗತ್ಯ ಇಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಒನ್ ಸೈಡ್ ಸ್ಪೀಕರ್ ಎಂದು ಬಿಜೆಪಿ ಆಕ್ರೋಶ: ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಬಿಜೆಪಿ ಸದಸ್ಯರು ‘ಓನ್ ಸೈಡ್ ಸ್ಪೀಕರ್, ಓನ್ ಸೈಡ್ ಸ್ಪೀಕರ್’ ಎಂದು ಘೋಷಣೆ ಕೂಗಿದರು. ವಿಧಾನಸಭೆ ಪರಂಪರೆ ಹಾಳು ಮಾಡಬೇಡಿ, ಆ ಸ್ಥಾನದ ಘನತೆ ಉಳಿಸಿ, ಒತ್ತಡಕ್ಕೆ ಮಣಿದು ಸದನ ನಡೆಸಬೇಡಿ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ಇದೇನು ಕಾಂಗ್ರೆಸ್ ಅಧಿವೇಶನ ಅಲ್ಲ, ಸ್ಪೀಕರ್ ಓನ್ ಸೈಡ್ ಆಗಿ ವರ್ತಿಸುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಡಿ.ಕೆ.ಶಿವಕುಮಾರ್, ಏನ್ ಒನ್ ಸೈಡ್ ಏನಿದು ಮಾತು. ನಿಮ್ಮ ಸ್ಪೀಕರ್ ಅಲ್ಲಿದ್ದಾಗ ಏನೇನೂ ಮಾಡಿದ್ದಾರೆ ಎಂದು ಗೊತ್ತಿಲ್ಲವೇ? ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಇದು ಕಾಂಗ್ರೆಸ್ ಅಧಿವೇಶನ ಅಲ್ಲ. ನೀವು ಪಕ್ಷಾತೀತವಾಗಿ ಇರಬೇಕು ಎಂದರು.

ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರ ಗದ್ದಲದ ನಡುವೆಯೆ ಗಮನ ಸೆಳೆಯುವ ಸೂಚನೆಯ ಪ್ರಕ್ರಿಯೆ ನಡೆಸಿದ ಸ್ಪೀಕರ್ ಯು.ಟಿ.ಖಾದರ್, ನಂತರ ನಾಳೆ ಬೆಳಗ್ಗೆ 10.30ಕ್ಕೆ ಸೇರುವಂತೆ ಸದನವನ್ನು ಮುಂದೂಡಿದರು.

 

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News