ಯಲಹಂಕ ಸರಕಾರಿ ಆಸ್ಪತ್ರೆಯಲ್ಲಿ 'ಹೆರಿಗೆ'ಗೂ ಲಂಚ; ಲೋಕಾಯುಕ್ತ ಪೊಲೀಸರ ದಾಳಿಯಿಂದ ಬಯಲು
ಬೆಂಗಳೂರು, ಜು.19: ಯಲಹಂಕ ಸರಕಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಮಹಿಳೆಯೊಬ್ಬರಿಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಲು ಪಡೆದಿದ್ದ 10 ಸಾವಿರ ರೂ. ಲಂಚದ ಹಣವನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಮಾಹಿತಿ ನೀಡಿರುವ ಅವರು, ಮಂಜುಳಾ ಎಂಬುವವರ ಹೆರಿಗೆ ಮಾಡಿಸಲು ಪ್ರಸೂತಿ ತಜ್ಞ ಡಾ.ರಾಮಚಂದ್ರ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆಕೆಯ ಪತಿ ಲಿಂಗಪ್ಪ ಎಂಬುವರರು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಅವರನ್ನು ಭೇಟಿ ಮಾಡಿ ಈ ಕುರಿತು ದೂರು ನೀಡಿದ್ದರು. ತಕ್ಷಣ ಲಂಚ ಪ್ರಕರಣದಲ್ಲಿ ವೈದ್ಯರ ಬಂಧನಕ್ಕೆ ಕಾರ್ಯಾಚರಣೆ ನಡೆಸುವಂತೆ ಸಂಸ್ಥೆಯ ಪೊಲೀಸರಿಗೆ ನಿರ್ದೇಶನ ನೀಡಲಾಗಿತ್ತು ಎಂದರು.
ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ವಿಭಾಗದ ಡಿವೈಎಸ್‍ಪಿ ನೇತೃತ್ವದ ತಂಡ ತಕ್ಷಣ ಯಲಹಂಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿತು. ಅಷ್ಟರಲ್ಲಿ ಮಂಜುಳಾ ಅವರ ಶಸ್ತ್ರಚಿಕಿತ್ಸೆ ಮುಗಿದು, ಹೆಣ್ಣು ಮಗು ಜನಿಸಿತ್ತು. ಡಾ.ರಾಮಚಂದ್ರ ಅವರ ಬದಲಿಗೆ ಡಾ. ಗುರುಪ್ರಿಯಾ ಎಂಬುವವರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಇದಕ್ಕಾಗಿ ವಾಹಿದ್ ಎಂಬ ವಾರ್ಡ್‍ಬಾಯ್ ಮೂಲಕ 10 ಸಾವಿರ ರೂ. ಲಂಚ ಪಡೆದುಕೊಂಡಿದ್ದರು ಎಂದು ಬಿ.ಎಸ್.ಪಾಟೀಲ್ ಹೇಳಿದ್ದಾರೆ.
ವಾರ್ಡ್‍ಬಾಯ್ ವಾಹಿದ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಡಾ.ರಾಮಚಂದ್ರ ಅವರ ಸೂಚನೆಯಂತೆ ಲಂಚ ಪಡೆದಿರುವುದಾಗಿ ಒಪ್ಪಿಕೊಂಡು ಡಾ.ರಾಮಚಂದ್ರ ಅವರಿಗೆ ಮೊಬೈಲ್ ಮೂಲಕ ಕರೆಮಾಡಿ ಹಣ ಪಡೆದಿರುವ ಬಗ್ಗೆ ತಿಳಿಸಿದ. ಈ ವೇಳೆ ಡಾ. ರಾಮಚಂದ್ರ ‘ನರ್ಸ್‍ಗೆ 500 ರೂ. ಕೊಡು, ನೀನು 500 ರೂ. ತೆಗೆದುಕೋ. ಉಳಿದ ಹಣ ಅಪೂರ್ವಗೆ ನೀಡು’ ಎಂದು ಹೇಳಿದ್ದಾರೆ.
ಈ ಧ್ವನಿಮುದ್ರಿಕೆ ಹಾಗೂ ವಿಡಿಯೊ ಸಾಕ್ಷ್ಯವನ್ನು ಜಪ್ತಿ ಮಾಡಲಾಗಿದೆ ಎಂದು ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಹೆರಿಗೆಗೆ ಆಗಮಿಸಿದವರ ಬಳಿಯೂ ಲಂಚ ಪಡೆಯುವ ಘಟನೆ ಅತ್ಯಂತ ಅಮಾನವೀಯವಾಗಿದೆ. ಘಟನೆ ಕುರಿತು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತದೆ. ಹಣವನ್ನು ವಾಪಸ್ ಕೊಡಿಸಲಾಗಿದ್ದು, ಆರೋಪಿತ ವೈದ್ಯರು ಮಾತ್ರವಲ್ಲದೆ ಆರೋಗ್ಯ ಇಲಾಖೆಯನ್ನು ಪ್ರತಿವಾದಿಯನ್ನಾಗಿಸಿ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಬಿ.ಎಸ್.ಪಾಟೀಲ್ ಹೇಳಿದ್ದಾರೆ.