ಜಮೀನು ಖಾತೆಗಾಗಿ ಪೋನ್ ಪೇಯಲ್ಲಿ ಲಂಚ; ಗ್ರಾಮ ಲೆಕ್ಕಿಗ ವಿರುದ್ಧ ಡಿಸಿಗೆ ದೂರು
ನಾಗಮಂಗಲ, ಜು.1: ತಾಲೂಕಿನ ಕಂದಾಯ ಇಲಾಖೆಯ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯೋರ್ವ ಜಮೀನು ಖಾತೆಗಾಗಿ ಮಹಿಳೆಯೊಬ್ಬರಿಂದ ಫೋನ್ ಪೇ ಮೂಲಕ 66 ಸಾವಿರ ರೂ.ಲಂಚ ಪಡೆದು ಖಾತೆ ಮಾಡದೇ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿರುವುದು ವರದಿಯಾಗಿದೆ.
ತಾಲೂಕಿನ ಬಿಂಡಿಗನವಿಲೆ ಹೋಬಳಿ ಲಾಳನಕೆರೆ ವೃತ್ತದ ಗ್ರಾಮಲೆಕ್ಕಿಗ ನಿಂಗಪ್ಪ ಸುರಪುರ ವಿರುದ್ಧ ಲಾಳನಕೆರೆ ಗ್ರಾಮದ ಮೀನಾಕ್ಷಿ ಎಂಬವರು ದಾಖಲೆ ಸಹಿತ ಮಂಡ್ಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ದೂರು ದಾರ ಮಹಿಳೆ ವರ್ಷದ ಹಿಂದೆ ತನ್ನ ಗಂಡ ಮತ್ತು ಮೈದುನ ಹೆಸರಿಗೆ, ತನ್ನ ಮಾವನ ಚುಂಚೇಗೌಡನ ಹೆಸರಲ್ಲಿ ಇದ್ದ ಜಮೀನಿನ ಜಂಟಿ ಖಾತೆಗೆ ವಿಎ ಭೇಟಿ ಮಾಡಿದ್ದರು. ಈ ವೇಳೆ ಡೆತ್ ಸರ್ಟಿಫಿಕೇಟ್‌ಗೆಂದು ಲಂಚಕ್ಕೆ ಬೇಡಿ ಕೆ ಇಟ್ಟು ವಿಎ ಎರಡು ಬಾರಿ ಫೋನ್ ಪೇ ಮೂಲಕ ಪಡೆದಿದ್ದಾನೆ. ಆ ನಂತರ ಖಾತೆಗಾಗಿ ವರ್ಷದಿಂದ ಇಲ್ಲ ಸಲ್ಲದ ಸಬೂಬು ಹೇಳಿ ಕಚೇರಿಗೆ ಅಲೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಡಿಸಿ ತುರ್ತು ನೋಟಿಸ್ ಜಾರಿ: ಇದೀಗ ಮಹಿಳೆಯಿಂದ ಲಂಚ ಪಡೆದ ಪ್ರಕರಣ ಜಿಲ್ಲಾಧಿಕಾರಿಗಳ ಅಂಗಳದಲ್ಲಿದ್ದು ಆರ್‌ಆರ್‌ಟಿ ಶಿರಸ್ತೆದಾರ್ ಹಾಗೂ ಬಿಂಡಿಗನವಿಲೆ ಹೋಬಳಿ ರಾಜಸ್ವ ನಿರೀಕ್ಷಕರಿಗೆ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ತುರ್ತು ನೋಟಿಸ್ ಜಾರಿಗೊಳಿಸಿದ್ದಾರೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿ ಬಂದಿದ್ದಾರೆ.
ಕರ್ತವ್ಯಕ್ಕೆ ಗೈರು: ಲಂಚಪಡೆದ ಅರೋಪದ ಗ್ರಾಮ ಆಡಳಿತಾಧಿಕಾರಿ ನಿಂಗಪ್ಪ ಸುರಪುರಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ತುರ್ತು ನೋಟಿಸ್ ನೀಡಿದ್ದು ವಾರದಿಂದ ಸರಕಾರಿ ಕರ್ತವ್ಯಕ್ಕೆ ಗೈರು ಹಾಜರಿಯಲ್ಲಿ ಇದ್ದಾರೆ ಎಂದು ತಿಳಿದುಬಂದಿದೆ.