ಕಂದಾಯ ಸಚಿವರ ಗಮನಕ್ಕೆ ತಂದು ಮಂಗಳೂರಿನ ಬೆಂಗ್ರೆ ಪ್ರದೇಶದ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ: ಸಚಿವ ಜಿ.ಪರಮೇಶ್ವರ್
ಬೆಳಗಾವಿ: ಮಂಗಳೂರು ತಾಲೂಕಿನ ಬೆಂಗ್ರೆ ಗ್ರಾಮದಲ್ಲಿ ಹೊಸದಾಗಿ ಚಕ್ ಬಂದಿ ಹಾಗೂ ಸರ್ವೆ ನಂಬರ್ ಹಾಕಿ ಹಕ್ಕುಪತ್ರಗಳನ್ನು ನೀಡುವ ಕುರಿತು ಕಂದಾಯ ಸಚಿವರ ಗಮನಕ್ಕೆ ತಂದು ವಿತರಣೆ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವೇದವ್ಯಾಸ ಕಾಮತ್ ಗಮನ ಸೆಳೆದ ಸೂಚನೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಪರವಾಗಿ ಉತ್ತರ ನೀಡಿದ ಅವರು, 1994-95 ರಲ್ಲಿ ಬ್ಲಾಕ್ ಗಳನ್ನು ಗುರುತಿಸಿ ಆಶ್ರಯ ಯೋಜನೆಯಡಿ ಹಕ್ಕು ಪತ್ರಗಳನ್ನು ವಿವರಿಸಲಾಗಿತ್ತು ಎಂದರು.
ಇದಕ್ಕೂ ಮುನ್ನ ವಿಷಯದ ಬಗ್ಗೆ ಗಮನ ಸೆಳೆದ ವೇದವ್ಯಾಸ ಕಾಮತ್ ಮಾತನಾಡಿ, 1994-95ರಲ್ಲಿ 1500 ಕುಟುಂಬಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಆಗ ಚಕ್ ಬಂದಿ ಹಾಗೂ ಸರ್ವೆ ನಂಬರ್ ಹಾಕದೆ ಹಕ್ಕು ಪತ್ರಗಳನ್ನು ನೀಡಲಾಗಿತ್ತು ಎಂದರು.
ಕಳೆದ ವರ್ಷ ಸುಮಾರು 900 ಕುಟುಂಬಗಳಿಗೆ ಹಳೆಯ ಹಕ್ಕುಪತ್ರಗಳಿಗೆ ಚಕ್ ಬಂದಿ ಹಾಗೂ ಸರ್ವೆ ನಂಬರ್ ಹಾಕಿ ವಿತರಣೆ ಮಾಡಿದ್ದಾರೆ. ಇನ್ನೂ 300-400 ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕಿದೆ. ಆದರೆ, ಹೊಸ ವ್ಯವಸ್ಥೆ ಬಂದ ಬಳಿಕ ನಮ್ಮ ಬಳಿ ದಾಖಲೆಗಳು ಇಲ್ಲ. ಹಕ್ಕು ಪತ್ರಕ್ಕಾಗಿ 10,500 ರೂ.ಗಳನ್ನು ಭರಿಸುವಂತೆ ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.
ಗ್ರಾಮಸ್ಥರು ಹೊಸದಾಗಿ ಹಕ್ಕುಪತ್ರಗಳನ್ನು ಕೇಳುತ್ತಿಲ್ಲ. ಈಗಾಗಲೇ ಕೊಟ್ಟಿರುವ ಹಕ್ಕು ಪತ್ರಗಳಿಗೆ ಚಕ್ ಬಂದಿ ಹಾಗೂ ಸರ್ವೆ ನಂಬರ್ ಹಾಕಿಕೊಡುವಂತೆ ಕೇಳುತ್ತಿದ್ದಾರೆ ಅಷ್ಟೇ ಎಂದು ವೇದವ್ಯಾಸ ಕಾಮತ್ ಹೇಳಿದರು.