ಬಜೆಟ್ 2024 | “ಬೆಂಗಳೂರಿನ ಆದಾಯವೆಷ್ಟು? ಕೊಟ್ಟ ಹಣವೆಷ್ಟು” ಎಂದು ಪ್ರಶ್ನಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2024-25 ಸಾಲಿನ ಆಯವ್ಯಯವನ್ನು ಟೀಕಿಸಿರುವ ಮಾಜಿ ಶಿಕ್ಷಣ ಸಚಿವ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು, "ಬೆಂಗಳೂರಿನಿಂದ ಸಂಗ್ರಹವಾಗಿರುವ ಆದಾಯವೆಷ್ಟು?. ಬಜೆಟ್‌ನಲ್ಲಿ ಬೆಂಗಳೂರಿಗೆ ಕೊಟ್ಟಿರುವ ಕುಡಿಕೆ ಹಣ ಎಷ್ಟು?" ಎಂದು ಪ್ರಶ್ನಿಸಿದ್ದಾರೆ.
ಈ ಮೇಲಿನಂತೆ ಫೇಸ್‌ಬುಕ್ ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು ‘ನಮ್ಮ ಹಣ, ನಮ್ಮ ಹಕ್ಕು’ ಎಂಬ ಹ್ಯಾಷ್‌ಟ್ಯಾಗ್ ಬಳಸಿದ್ದಾರೆ. ಇದರಿಂದ ಕೆರಳಿರುವ ಸಾಮಾಜಿಕ ಜಾಲತಾಣ ಬಳಕೆದಾರರು ಬಿಜೆಪಿಯ ಶಾಸಕರ ಪೋಸ್ಟ್‌ಗೆ ಕಮೆಂಟ್ ಹಾಕುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.
ಚಂದ್ರಶೇಖರ್ ವೆಂಕಟೆಗೌಡ ಎಂಬವರು, "ಇದೇ ಮಾತನ್ನು ಕರ್ನಾಟಕಕ್ಕೆ ಎಷ್ಟು ಕೊಟ್ಟಿದ್ದೀರಿ ಎಂದು ಮೋದಿಗೆ ಕೇಳಬಹುದು" ಎಂದು ಪ್ರಶ್ನಿಸಿದ್ದಾರೆ.
ಮಾಧವ ಲೋಹಿಯಾ ಎಂಬವರು "ದಯವಿಟ್ಟು ಸಾಧ್ಯವಾದ್ರೆ ಕರ್ನಾಟಕದ ಜಿಎಸ್ಟಿ ತೆರಿಗೆ ಬಗ್ಗೆ ದನಿ ಎತ್ತಿ, ಗುಜರಾತಿನ ಬಕೆಟ್ ಗಳಾಗಬೇಡಿ" ಎಂದು ಹೇಳಿದ್ದಾರೆ.
ಇಮಾಮ್ ಕೊಡೆಕರ್ ಎಂಬವರು, ಚುನಾವಣಾ ಬಾಂಡ್ ನಲ್ಲಿ ಬಂದ ಹಣ ಕಾರ್ಯಕರ್ತರಿಗೆಷ್ಟು? ದೊಡ್ಡ ಲೀಡರ್ ಗೆ ಎಷ್ಟು? ಎಂದು ಪ್ರಶ್ನಿಸಿದ್ದಾರೆ.
ಜ್ಞಾನ್ ಕಲ್ಲಹಳ್ಳಿ ಎಂಬವರು, "ಕರ್ನಾಟಕದಿಂದ ತೆರಿಗೆ ಹಣ ಎಷ್ಟು? ಕರ್ನಾಟಕಕ್ಕೆ ಕೇಂದ್ರ ಕೊಟ್ಟ ಕುಡಿಕೆ ಹಣ ಎಷ್ಟು ಅಂತಲೂ ಯೋಚಿಸಬೇಕು" ಎಂದು ತಿಳಿಸಿದ್ದಾರೆ.
ಪ್ರಭು ಹರಕಂಗಿ ಎಂಬವರು, "ಇಷ್ಟು ವಿದ್ಯಾವಂತರಾದ ನೀವೂ ಸಹ ಇಂತಹ ಸಿಲ್ಲಿ ಕಂಪ್ಯಾರಿಸನ್ ಮಾಡಿದ್ದು ನೋಡಿ ಬೇಜಾರಾಯ್ತು.. ಪ್ರತಾಪ್ ಸಿಂಹ ಮತ್ತು ನೀವು ಈ ವಿಷಯದಲ್ಲಿ ತಪ್ಪು ಮಾತಾಡಿದ್ದೀರಿ" ಎಂದು ಹೇಳಿದ್ದಾರೆ.
ಮಾರುತಿ ಸುರಕುಂಟೆ ಎಂಬವರು, " ಮೊದಲು ರಾಜ್ಯಕ್ಕೆ ಬರಬೇಕಿರುವ ಹಣವನ್ನು ಕೇಳಲು ನೀವು ಮತ್ತು ಬಿಜೆಪಿ ಕರ್ನಾಟಕದ ನಾಯಕರು ಬಾಯ್ಬಿಟ್ಟು ಮಾತಾಡಿ, ಬಳಿಕ ಎಲ್ಲದಕ್ಕೂ ಸಾಧ್ಯವಾದಷ್ಟು ಹಣ ವಿತರಿಸಬಹುದು" ಎಂದು ತಿಳಿಸಿದ್ದಾರೆ.
ತ್ಯಾಗರಾಜ್ ಮೂರ್ತಿ ಎಂಬವರು, ಪಿಎಂ ಕೇರ್ ನಲ್ಲಿ ಇರುವ ಹಣ ಎಷ್ಟು ಅದರಲ್ಲಿ ಎಷ್ಟು ಖರ್ಚಾಗಿದೆ ಎಂದು ಕೇಳಬಹುದು ಅಲ್ಲವೇ ಸರ್ ಎಂದು ಪ್ರಶ್ನಿಸಿದ್ದಾರೆ.