ರಾಜ್ಯದ ಜನರ ಸರ್ವಾಂಗೀಣ ಏಳಿಗೆಗೆ ಪೂರಕವಾದ ಬಜೆಟ್: ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ

Update: 2023-07-07 11:29 GMT

ಹುಬ್ಬಳ್ಳಿ ಜು.7: ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯದ ಜನರನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ರೂ.3 ಲಕ್ಷ 28 ಸಾವಿರ ಕೋಟಿ ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ. ಆ ಮೂಲಕ ರಾಜ್ಯದ ಎಲ್ಲ ವರ್ಗದ ಜನರ ಸರ್ವಾಂಗೀಣ ಏಳಿಗೆಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಈ ಬಗ್ಗೆ ಮಾದ್ಯಮ ಪ್ರಕಟನೆ ಹೊರಡಿಸಿರುವ ಅವರು, 'ರಾಜ್ಯದ ಜನರಿಗೆ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಬದ್ಧವಾಗಿದೆ. ಆ ಹಿನ್ನೆಲೆಯಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಗಳನ್ನು ಜಾರಿ ಮಾಡಲಾಗುವುದು. ಇವುಗಳ ಜಾರಿಗೆ ರೂ.52 ಸಾವಿರ ಕೋಟಿ ಅಗತ್ಯವಿದ್ದು, ರಾಜ್ಯದ 1 ಕೋಟಿಗೂ ಅಧಿಕ ಜನಸಾಮಾನ್ಯರಿಗೆ ಮಾಸಿಕ 4 ರಿಂದ 5 ಸಾವಿರ ನೀಡಲಾಗುವುದು. ಅಲ್ಲದೇ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಸಹ ಕೈಬಿಡಲಾಗುವುದು. ರೈತರಿಗೆ ನೀಡಲಾಗುತ್ತಿರುವ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಸಾಲ ರೂ. 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಹಾಗೂ ದೀರ್ಘಾವಧಿ ಸಾಲ ರೂ. 10 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಳ ಮಾಡಲಾಗುತ್ತಿದೆ. 100 ರೈತ ಉತ್ಪಾದನಾ ಕಂಪನಿಗಳಿಗೆ ಶೇ.4 ಬಡ್ಡಿದರದಲ್ಲಿ ಸಹಾಯಧನ ಒದಗಿಸಲಾಗುವುದು. ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ ರೂ.10 ಕೋಟಿ ಅನುದಾನ, ಇಂದಿರಾ ಕ್ಯಾಂಟೀನ್ ಗೆ ರೂ. 100 ಕೋಟಿ ಅನುದಾನ ಮೀಸಲಿಡಲಾಗುತ್ತಿದೆ. ದೇಶದಲ್ಲೇ ಮೊದಲ ಅಂಗಾAಗ ಜೋಡಣೆ ಆಸ್ಪತ್ರೆ ಸ್ಥಾಪಿಸಲಾಗುವುದು. ಅಲ್ಲದೇ ರಾಮನಗರದಲ್ಲಿ ಅತಿದೊಡ್ಡ ರೈಷ್ಮೆ ಮಾರುಕಟ್ಟೆಯನ್ನು ರೂ. 75 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುತ್ತಿದೆ. ಹುಬ್ಬಳ್ಳಿಯ ಗುರುದ್ವಾರ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತಿದೆ. ಸಮಾಜದ ಕೆಳ, ಮಧ್ಯಮ ವರ್ಗದ ಜನರ ಸರ್ವತೋಮುಖ ಏಳಿಗ್ಗೆಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ' ಎಂದು ಅವರು ತಿಳಿಸಿದ್ದಾರೆ.

'ರಾಜ್ಯದ ಅರ್ಥ ವ್ಯವಸ್ಥೆಯು ಹಿಂದಿನ ಸರ್ಕಾರ ಅವಧಿಯಲ್ಲಿ ಹದಗೆಟ್ಟಿತ್ತು. ಕೃಷಿ, ಕೈಗಾರಿಕೆ ಹಾಗೂ ಸೇವಾ ವಲಯಗಳಲ್ಲಿ ಕುಂಠಿತ ಬೆಳವಣಿಗೆಯನ್ನು ಕಂಡಿತ್ತು. ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಹಿಂದಿನ ಸರ್ಕಾರ ವಿಫಲವಾಗಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಹಾಗೂ ತೈಲ ಬೆಲೆ ಏರಿಕೆಯನ್ನು ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ವಿದೇಶಿ ಬಂಡವಾಳ ಸೆಳೆಯಲು ಸರ್ಕಾರ ಮುಂದಾಗಲಿದೆ. ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ನೀರಾವರಿ, ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲ ವಲಯಗಳ ಅಭಿವೃದ್ಧಿಗೆ ಪೂರಕವಾದ ಬಜೆಟ್ ಇದಾಗಿರುವುದು ಸ್ವಾಗತಾರ್ಹವಾದದ್ದು' ಎಂದು ಜಗದೀಶ ಶೆಟ್ಟರ್ ಅವರು ಬಣ್ಣಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News