ತೆರಿಗೆ ಹೊರೆ ಇಲ್ಲದ ಅಭಿವೃದ್ಧಿ ‘ಗ್ಯಾರಂಟಿ’ಯ ಬಜೆಟ್

Update: 2023-07-07 15:41 GMT

ಬೆಂಗಳೂರು, ಜು. 7: ‘ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ ಹಾಗೂ ಯುವನಿಧಿ’ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಜಾರಿಗೆ 52ಸಾವಿರ ಕೋಟಿ ರೂ.ಗಳನ್ನು ಒದಗಿಸಲು ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿ, ಜನಸಾಮಾನ್ಯರ ಮೇಲೆ ಯಾವುದೇ ತೆರಿಗೆ ವಿಧಿಸದೆ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಪರಿಕಲ್ಪನೆಯ ರಾಜ್ಯದ ಅಭಿವೃದ್ಧಿಗೆ ಪೂರಕವಾದ ತಮ್ಮ ದಾಖಲೆಯ 14ನೆಯ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ್ದಾರೆ.

ಶುಕ್ರವಾರ ವಿಧಾನಸಭೆಯಲ್ಲಿ ಹಣಕಾಸು ಸಚಿವರೂ ಆಗಿರುವ ಸಿದ್ದರಾಮಯ್ಯ 2023-24ನೆ ಸಾಲಿನ ಒಟ್ಟು 3,27,747 ಕೋಟಿ ರೂ.ಮೊತ್ತದ ಆಯವ್ಯಯ ಮಂಡಿಸಿದ್ದು, ಒಟ್ಟು ಸ್ವೀಕೃತಿ 3,24,478 ಕೋಟಿ ರೂ., ರಾಜಸ್ವ ಸ್ವೀಕೃತಿ2,38,410 ಕೋಟಿ ರೂ., ಸಾರ್ವಜನಿಕ ಋಣ(ಸಾಲ)85,818 ಕೋಟಿ ರೂ.ಗಳು ಎಂದು ಉಲ್ಲೇಖಿಸಿದರು.

ಗ್ಯಾರಂಟಿ ಯೋಜನೆಗಳನ್ನು ‘ಬಿಟ್ಟಿ’ ಕೊಡುಗೆಗಳೆಂದು ಹಂಗಿಸುವ ಪ್ರತಿಪಕ್ಷಗಳಿಗೆ ಬಜೆಟ್ ಭಾಷಣದಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ಅಭಿವೃದ್ಧಿಯ ಫಲವನ್ನು ದುರ್ಬಲರಿಗೆ ಹಂಚುವ ಪ್ರಯತ್ನ’ ಎಂದು ಸಮರ್ಥಿಸಿದರು. ‘ದಲಿತರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಸೇರಿದಂತೆ ದುರ್ಬಲರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಘೋಷಿಸಿದ್ದು, ರೈತರಿಗೆ ಶೂನ್ಯ ಬಡ್ಡಿದರದ ಸಾಲವನ್ನು 3ಲಕ್ಷ ರೂ.ನಿಂದ 5ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಶೇ.3ರ ಬಡ್ಡಿ ದರದಲ್ಲಿ ರೈತರಿಗೆ ನೀಡುವ ಸಾಲ 10ಲಕ್ಷ ರೂ.ನಿಂದ 20ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗುವುದು ಎಂದು ಘೋಷಿಸಿದರು.

2018ರಲ್ಲಿ ಜಾರಿಗೆ ತಂದಿದ್ದ ಕೃಷಿ ಭಾಗ್ಯ ಹಾಗೂ ಅನುಗ್ರಹ, ಅರಿವು ಯೋಜನೆಯನ್ನು ಮರು ಜಾರಿ ಮಾಡಲಾಗುವುದು. ಮಕ್ಕಳ ಕಲಿಕಾ ನ್ಯೂನತೆ ಹೋಗಲಾಡಿಸಲು ಮರುಸಿಂಚನ ಯೋಜನೆ ಪ್ರಕಟಿಸಿದ್ದು, ಶಾಲೆಗಳ ಸುತ್ತಮುತ್ತ 50ಲಕ್ಷ ಸಸಿ ನೆಡುವ ಸಸ್ಯ ಶ್ಯಾಮಲ ಯೋಜನೆ ಪ್ರಕಟಿಸಿದ್ದಾರೆ. ಶಾಲಾ ಮಕ್ಕಳಿಗೆ ವಾರದಲ್ಲಿ ಒಂದು ಬಾರಿ ವಿತರಿಸುತ್ತಿರುವ ಮೊಟ್ಟೆ, ಶೇಂಗಾ, ಚಿಕ್ಕಿ, ಬಾಳೆಹಣ್ಣನ್ನು ವಾರದಲ್ಲಿ 2ದಿನ ವಿತರಿಸುವ ಘೋಷಣೆ ಜತೆಗೆ ಈ ಯೋಜನೆಯನ್ನು 9 ಮತ್ತು 10ನೆ ತರಗತಿ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಕೃಷಿಭಾಗ್ಯ ಯೋಜನೆ ಮರುಜಾರಿಗೆ 100 ಕೋಟಿ ರೂ., ರಾಮನಗರ ಮಾದರಿಯಲ್ಲೇ ಶಿಡ್ಲಘಟ್ಟದಲ್ಲಿ 75 ಕೋಟಿ ರೂ.ವೆಚ್ಚದಲ್ಲಿ ರೇಶ್ಮೆಗೂಡಿನ ಹೈಟೆಕ್ ಮಾರುಕಟ್ಟೆ ಅಭಿವೃದ್ಧಿ, ಮೀನುಗಾರ ಮಹಿಳೆಯರಿಗೆ ಬಡ್ಡಿ ರಹಿತ ಸಾಲಮಿತಿಯನ್ನು 50 ಸಾವಿರ ರೂ.ನಿಂದ 3ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

ಪರಿಶಿಷ್ಟ ಕಲ್ಯಾಣಕ್ಕೆ ಮೀಸಲಿಟ್ಟ ಎಸ್ಸಿಪಿ-ಟಿಎಸ್ಪಿ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡಲು ಅವಕಾಶ ಕಲ್ಪಿಸಲು ‘7-ಡಿ’ಯನ್ನು ರದ್ದುಪಡಿಸಲಾಗುವುದು. ಪರಿಶಿಷ್ಟರ ಕಲ್ಯಾಣಕ್ಕೆ 4,079 ಕೋಟಿ ರೂ.ಹೆಚ್ಚಳ ಮಾಡಲಾಗಿದೆ. ಬೆಂಗಳೂರು ನಗರದಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಹಠಾತ್ ಹೃದಯಾಘಾತ ತಡೆಗಟ್ಟಲು ಪುನಿತ್ ರಾಜ್‍ಕುಮಾರ್ ಹೆಸರಿನಲ್ಲಿ ಹೊಸ ಯೋಜನೆ ರೂಪಿಸಲಾಗುವುದು. ಸ್ಟಾರ್ಟ್‍ಅಪ್ ಉತ್ತೇಜನಕ್ಕೆ ಕ್ರಮ ವಹಿಸಿದ್ದು, ವಿಜಯಪುರ ಜಿಲ್ಲೆಯಲ್ಲಿ ಉತ್ಪಾದನಾ ಕ್ಲಸ್ಟರ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಫ್ತು ಆಧರಿತ ಕೈಗಾರಿಕಾ ಕ್ಲಸ್ಟರ್ ಅಭಿವೃದ್ದಿಪಡಿಸಲಾಗುವುದು. ದಕ್ಷಿಣ ಕನ್ನಡ ಸೇರಿದಂತೆ ಆರು ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕಟ್ಟಡ ಹಾಗೂ 25 ತಾಲೂಕುಗಳಲ್ಲಿ ಆಡಳಿತ ಸೌಧ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಹೊಸ ಮಾದರಿ: ಐದು ಗ್ಯಾರಂಟಿ ಯೋಜನೆ ಜಾರಿಗೆ ವಾರ್ಷಿಕ 52ಸಾವಿರ ಕೋಟಿ ರೂ. ವೆಚ್ಚವಾಗಲಿದ್ದು, 1.30ಕೋಟಿ ಕುಟುಂಬಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಪ್ರತಿ ಕುಟುಂಬಕ್ಕೆ ಮಾಸಿಕ 4 ಸಾವಿರ ರೂ.ನಿಂದ 5 ಸಾವಿರ ರೂ.ಗಳಷ್ಟು ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯವೆಂಬ ಪರಿಕಲ್ಪನೆಯಂಬ ದೇಶದಲ್ಲೆ ಪ್ರಥಮ ಬಾರಿಗೆ ಅನುμÁ್ಠನಗೊಳಿಸುವ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ ಎಂದು ಸಿದ್ದರಾಮಯ್ಯ ಪ್ರಕಟಿಸಿದರು.

‘ಅನ್ನಭಾಗ್ಯಕ್ಕೆ 10 ಸಾವಿರ ಕೋಟಿ ರೂ., ಗೃಹಜ್ಯೋತಿಗೆ 13.910 ಕೋಟಿ ರೂ., ಗೃಹಲಕ್ಷ್ಮಿ ಯೋಜನೆಗೆ 30ಸಾವಿರ ಕೋಟಿ ರೂ., ಮಹಿಳೆಯರ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆಗೆ 4ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ಹಣಕಾಸಿನ ಹೊಂದಾಣಿಕೆ ಮಾಡಿದ್ದು, ಈಗಾಗಲೇ ಅನ್ನಭಾಗ್ಯ ಮತ್ತು ಗೃಹಜ್ಯೋತಿ, ಶಕ್ತಿ ಯೋಜನೆಗಳು ಜಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್‍ನಿಂದ ಜಾರಿ ಮಾಡಲಾಗುವುದು, ಯುವನಿಧಿ 2023ರಲ್ಲಿ ಪದವಿ ಪಡೆದ ಯುವ ಜನರಿಗೆ ಜಾರಿಯಾಗಲಿದೆ’ ಎಂದು ಸಿದ್ದರಾಮಯ್ಯ ವಿವರ ನೀಡಿದರು.

‘ಗ್ಯಾರಂಟಿ ಯೋಜನೆಗಳು ಕೇಂದ್ರ ಸರಕಾರದ ವೈಫಲ್ಯದಿಂದ ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ತುಸು ನಿರಾಳತೆ ತಂದು ಕೊಡುತ್ತವೆ. ಮನೆಯಿಂದ ದೂರದ ಸ್ಥಳದಲ್ಲಿಯೂ ಉದ್ಯೋಗ ಕಂಡುಕೊಳ್ಳಲು ಶಕ್ತಿ ಯೋಜನೆ ನೆರವಾಗುತ್ತದೆ. ಅನ್ನಭಾಗ್ಯ ಯೋಜನೆ ಯಾರೂ ಹಸಿದುಕೊಂಡಿರಬಾರದು ಎಂಬುದನ್ನು ಖಾತ್ರಿಪಡಿಸುತ್ತದೆ. ಯುವನಿಧಿ ಉದ್ಯೋಗಾಕಾಂಕ್ಷಿ ಯುವಕರಿಗೆ ಮಾನಸಿಕ ಸ್ಥೈರ್ಯ ನೀಡುತ್ತದೆ. ನ್ಯಾಯ, ಸಮತೆ ಮತ್ತು ಅಭಿವೃದ್ಧಿ ಕಾತರಿಯುಳ್ಳ ಬಜೆಟ್ ಇದು’ ಎಂದು ಅವರು ತಿಳಿಸಿದರು.

‘ಹಿಂದಿನ ಸರಕಾರ ಮೂರ್ಖತನದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಸರಕಾರ ಪ್ರಗತಿದಾಯಕ, ಬಡವರ ಕೈಗೆ ದುಡ್ಡು, ಉದ್ಯೋಗ ನೀಡುವ, ರಾಜ್ಯವನ್ನು ಹಸಿವು ಮುಕ್ತ ಮಾಡುವ ಹಾಗೂ ಬಂಡವಾಳ ಆಕರ್ಷಿಸುವಂತಹ ಬಜೆಟ್ ಮಂಡಿಸಲಾಗಿದೆ’

-ಸಿದ್ದರಾಮಯ್ಯ ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News