ಕೊಬ್ಬರಿ ಖರೀದಿ | ಪಕ್ಷಭೇದ ಮರೆತು ಸರಕಾರಕ್ಕೆ ಆಗ್ರಹಿಸಿದ ಸದಸ್ಯರು
ಬೆಂಗಳೂರು: ರಾಜ್ಯ ಸರಕಾರವೂ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸುವ ಮೂಲಕ ರೈತರನ್ನು ಸಂಕಷ್ಟದಿಂದ ರಕ್ಷಿಸಬೇಕೆಂದು ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.
ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಜೆಡಿಎಸ್ ಶಾಸಕರಾದ ಎಚ್.ಡಿ.ರೇವಣ್ಣ, ಸಿ.ಎನ್.ಬಾಲಕೃಷ್ಣ, ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಸೇರಿದಂತೆ ಪ್ರಮುಖರು ಪ್ರಸ್ತಾಪಿಸಿ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಸಿ ನ್ಯೂನತೆಯನ್ನು ಸರಿಪಡಿಸುವಂತೆ ಆಗ್ರಹಿಸಿದರು.
ಆರಂಭದಲ್ಲಿ ಎಚ್.ಡಿ.ರೇವಣ್ಣ ಪ್ರಸ್ತಾಪಿಸಿ, ತೆಂಗಿನಕಾಯಿ ಬೆಲೆ ಸಹ ಕುಸಿದಿದ್ದು, ಅದಕ್ಕೂ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಲಾಗಿದೆ.ಇನ್ನೂ, ವಿಧಾನಸಭಾ ಚುನಾವಣೆ ವೇಳೆ 15 ಸಾವಿರ ರೂ. ಬೆಂಬಲ ಬೆಲೆ ನೀಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದರು. 15 ಸಾವಿರ ರೂ. ನೀಡಿ ಖರೀದಿಸದಿದ್ದರೆ ಚುನಾವಣೆಗಷ್ಟೇ ನಾವು ಭರವಸೆ ನೀಡಿದ್ದೆವು ಎಂದು ಹೇಳಲಿ ಎಂದರು.
ಅಲ್ಲದೆ, ಕೇಂದ್ರ ಕೃಷಿ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಭೇಟಿ ಮಾಡಿ ಕೊಬ್ಬರಿ ಖರೀದಿ ಬಗ್ಗೆ ವಿಷಯ ಪ್ರಸ್ತಾಪಿಸಲಾಗಿತ್ತು. ನಂತರ ಕೇಂದ್ರದಿಂದ ಪ್ರತಿ ಕ್ವಿಂಟಲ್‍ಗೆ 12 ಸಾವಿರ ರೂ.ನಂತೆ ಖರೀದಿಗೆ ಅವಕಾಶ ನೀಡಿದೆ. ಇದರಲ್ಲಿ ಕೆಲವೆಡೆ ಲೋಪದೋಷಗಳಿದ್ದು, ಸರಿಪಡಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್‍ನ ಸದಸ್ಯ ಶಿವಲಿಂಗೇಗೌಡ ಮಾತನಾಡಿ, ಕೇಂದ್ರ ಸರಕಾರ ಕೇವಲ 250ರೂ.ಮಾತ್ರ ಹೆಚ್ಚಿಸಿದೆ. ರಾಜ್ಯ ಸರಕಾರ 1,500 ರೂ. ಬೆಲೆಯನ್ನು ಕೊಬ್ಬರಿಗೆ ನೀಡುತ್ತಿದೆ. ನಫೇಡ್ ಕೇಂದ್ರ ವ್ಯಾಪ್ತಿಗೆ ಬರುತ್ತದೆ. ಮಾರುಕಟ್ಟೆ ದರ ಕ್ವಿಂಟಲ್‍ಗೆ 10 ಸಾವಿರ ರೂ. ಕೇಂದ್ರ ಸರಕಾರ 2ಸಾವಿರ ರೂ.ಮಾತ್ರ ನೀಡುತ್ತಿದೆ. 15 ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿಸಬೇಕು ಎಂದರು.
ಇದರ ಮಧ್ಯೆ ಕೆಲಕಾಲ ಎಚ್.ಡಿ.ರೇವಣ್ಣ ನಡುವೆ ವಾಗ್ವಾದ ನಡೆದಾಗ ಸಿ.ಎನ್.ಬಾಲಕೃಷ್ಣ ವಿಷಯ ಪ್ರಸ್ತಾಪಿಸಿ, ರೈತರ ಬಳಿ ಒಂದೂವರೆ ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಉಳಿದಿದ್ದು, ಅದರ ಖರೀದಿಗೆ ಕ್ರಮ ಕೈಗೊಳ್ಳಬೇಕು. ಬೆಳೆಗಾರರಲ್ಲದವರಿಂದ ಖರೀದಿ ಮಾಡಿರುವುದರ ಬಗ್ಗೆ ನೈಜತೆ ಪರಿಶೀಲನೆಗೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಇದು ಸೂಕ್ತ ವಿಚಾರ. ಇದರ ಬಗ್ಗೆ ಇನ್ನೂ ಸುದೀರ್ಘವಾಗಿ ಚರ್ಚೆಯಾಗಬೇಕು. ಕೊಬ್ಬರಿ ಖರೀದಿ ಬಗ್ಗೆ ಇರುವ ಸಮಸ್ಯೆಗಳ ನಿವಾರಣೆ ಹಾಗೂ ಕ್ರಮಗಳ ಬಗ್ಗೆ ಕೃಷಿ ಸಚಿವರು ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ’ ಎಂದು ಸದನಕ್ಕೆ ಭರವಸೆ ನೀಡಿದರು.