ಮೂರು ಕ್ಷೇತ್ರಗಳ ಉಪಚುನಾವಣೆ : ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ ತೆರೆ

Update: 2024-11-10 15:52 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ಮೂರು ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರ ನಾಳೆ(ನ.11) ಸಂಜೆ ತೆರೆ ಬೀಳಲಿದೆ. ಹೀಗಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಸೇರಿದಂತೆ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‍ನ ಘಟಾನುಘಟಿ ನಾಯಕರು ಕೊನೆಯ ಕ್ಷಣದಲ್ಲಿ ತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ತೀವ್ರ ಪೈಪೋಟಿ ಸೃಷ್ಟಿಸಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ, ಬಳ್ಳಾರಿ ಜಿಲ್ಲೆಯ ಸಂಡೂರು ಹಾಗೂ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಸೋಮವಾರ ಸಂಜೆ 5:30ಕ್ಕೆ ತೆರೆ ಬೀಳಲಿದೆ. ಮತದಾರರಲ್ಲದವರು ಆಯಾ ಕ್ಷೇತ್ರವನ್ನು ಬಿಟ್ಟು ತೆರಳಬೇಕಿದೆ. ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಒಟ್ಟು 31 ಅಭ್ಯರ್ಥಿಗಳು ಅಖಾಡದಲ್ಲಿದ್ದರೆ, ಸಂಡೂರಿನಲ್ಲಿ ಕಾಂಗ್ರೆಸ್‍ನ ಇ.ಅನ್ನಪೂರ್ಣ, ಬಿಜೆಪಿಯ ಬಂಗಾರು ಹನುಮಂತ ಸಹಿತ ಆರು ಮಂದಿ ಕಣದಲ್ಲಿದ್ದು, ಅತ್ತ ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಭರತ್ ಬೊಮಾಯಿ, ಕಾಂಗ್ರೆಸ್‍ನ ಯಾಸೀರ್ ಅಹ್ಮದ್ ಖಾನ್ ಪಠಾಣ್ ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಜೋಷಿ, ಮಾಜಿ ಸಿಎಂಗಳಾದ ಯಡಿಯೂರಪ್ಪ, ಬಸವರಾಜ ಬೊಮಾಯಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹಿತ ಸಚಿವರು, ಶಾಸಕರು, ಸಂಸದರು ದಂಡೇ ಚುನಾವಣಾ ಪ್ರಚಾರದ ಭರಾಟೆಯಲ್ಲಿ ತೊಡಗಿದೆ.

‘ಕ್ಷೇತ್ರಗಳ ಅಭಿವೃದ್ದಿ’ ಭರವಸೆಯ ಜೊತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪ್ರಚಾರ ಮಾಡುತ್ತಿದ್ದರೆ, ಪ್ರತಿಪಕ್ಷಗಳು ಮುಡಾ, ವಾಲ್ಮೀಕಿ ಹಗರಣ ಸಹಿತ ವಕ್ಫ್ ಆಸ್ತಿ ವಿವಾದವನ್ನು ಮುನ್ನಲೆಗೆ ತಂದು ಸರಕಾರದ ವಿರುದ್ಧ ಆರೋಪ ಮಾಡುತ್ತಿದೆ. ಈ ಮಧ್ಯೆ ‘ಕಣ್ಣೀರಿನ’ ಪರ-ವಿರೋಧ ಚರ್ಚೆಯೂ ಮೂರು ಕ್ಷೇತ್ರಗಳಲ್ಲಿ ಬಿರುಸಾಗಿದೆ.

ಬಹಿರಂಗ ಪ್ರಚಾರಕ್ಕೆ ನಾಳೆಯೇ ಕೊನೆಯ ದಿನವಾಗಿದ್ದು, ಮತದಾರರ ಮನಗೆಲ್ಲಲ್ಲು ಕೊನೆಯ ಕ್ಷಣದಲ್ಲಿ ಆಯಾ ಕ್ಷೇತ್ರಗಳಲ್ಲಿ ರ್ಯಾಲಿ, ಬಹಿರಂಗ ಸಭೆ, ರೋಡ್ ಶೋಗಳ ಅಬ್ಬರ, ಪ್ರಚಾರದ ಭರಾಟೆಯೂ ಜೋರಾಗಿದೆ. ಜತೆಗೆ ಆಯಾ ಪಕ್ಷಗಳ ಕಾರ್ಯಕರ್ತರ ಪಡೆ, ಮನೆ-ಮನೆಗಳಿಗೆ ತೆರಳಿ ಮತಯಾಚನೆ ಮಾಡುತ್ತಿದೆ.

ನ.13ರ ಬೆಳಗ್ಗೆ ಮೂರು ಕ್ಷೇತ್ರಗಳಲ್ಲಿ ಉಪಚುನಾವಣಾ ಮತದಾನ ನಡೆಯಲಿದ್ದು, ನ.23ಕ್ಕೆ ಮತ ಎಣಿಕೆ ನಡೆಯಲಿದ್ದು ಅಂದೇ ಫಲಿತಾಂಶ ಪ್ರಕಟಿಸುವ ಸಾಧ್ಯತೆಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News