ಉಪಚುನಾವಣೆ | ರಾಜ್ಯದ ಮೂರು ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ

Update: 2024-11-13 15:05 GMT

ಬೆಂಗಳೂರು: ರಾಜ್ಯದ ಮೂರು ಕ್ಷೇತ್ರಗಳಿಗೆ ಬುಧವಾರ ನಡೆದ ಉಪಚುನಾವಣೆಯಲ್ಲಿ ಯಾವುದೇ ಗೊಂದಲಗಳಿಲ್ಲದೆ, ಬಹುತೇಕ ಶಾಂತಿಯುತವಾಗಿ ಮತದಾನವಾಗಿದೆ. ಚನ್ನಪಟ್ಟಣ ಕ್ಷೇತ್ರದಲ್ಲಿ ಶೇ.88.80, ಶಿಗ್ಗಾಂವಿಯಲ್ಲಿ ಶೇ.80.48 ಹಾಗೂ ಸಂಡೂರು ಕ್ಷೇತ್ರದಲ್ಲಿ ಶೇ.76.24ರಷ್ಟು ಮತದಾನವಾಗಿದೆ.

ಮೂರು ಕ್ಷೇತ್ರಗಳಲ್ಲೂ ಬೆಳಗ್ಗೆಯಿಂದಲೆ ಮತದಾರರು ಉತ್ಸಾಹದಿಂದ ಆಗಮಿಸಿ ಸರದಿ ಸಾಲಿನಲ್ಲಿ ನಿಂತಿ ತಮ್ಮ ಹಕ್ಕುಗಳನ್ನು ಚಲಾಯಿಸಿದರು. ಘಟಾನುಗಟಿ ಅಭ್ಯರ್ಥಿಗಳ ಭವಿಷ್ಯವು ಮತಯಂತ್ರ ಸೇರಿದ್ದು, ನ.23ರಂದು ಹೊರಬೀಳುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹಾಗೂ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತಮ್ಮ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತದಾನ ಮಾಡಿದರು.

ಅಭ್ಯರ್ಥಿಗಳ ಕ್ರಮ ಸಂಖ್ಯೆ ಬದಲಾದ ಆರೋಪ: ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಮತಗಟ್ಟೆ 4ರಲ್ಲಿ ವಿದ್ಯುನ್ಮಾನ ಮತಯಂತ್ರ(ಇವಿಎಂ)ಕ್ಕೆ ಅಂಟಿಸಿರುವ ಅಭ್ಯರ್ಥಿಗಳ ಕ್ರಮ ಸಂಖ್ಯೆಯನ್ನು ಅದಲು ಬದಲು ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತು. ಈ ಹಿನ್ನೆಲೆಯಲ್ಲಿ ಎನ್‍ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತಗಟ್ಟೆಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು. ಆದರೆ, ಅಂತಹ ಯಾವುದೇ ಗೊಂದಲಗಳು ಆಗಿಲ್ಲ ಎಂದು ಮತಗಟ್ಟೆ ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಇವಿಎಂ ಅಲ್ಲಿ ಅಭ್ಯರ್ಥಿಗಳ ಕ್ರಮ ಸಂಖ್ಯೆ ಅದಲು ಬದಲು ಆಗಿರುವುದನ್ನು ಸ್ಥಳೀಯ ಮುಖಂಡರು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಸಂಬಂಧ ನಮ್ಮ ಪಕ್ಷದ ಮುಖಮಂಡರ ಸಲಹೆಯನ್ನು ಪಡೆದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಸ್ಟ್ರಾಂಗ್ ರೂಮ್ ಸೇರಿದ ವಿದ್ಯುನ್ಮಾನ ಮತ ಯಂತ್ರಗಳು: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ರಾಮನಗರ ಜಿಲ್ಲೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಹಾವೇರಿ ಜಿಲ್ಲೆಯ ದೇವಗಿರಿಯಲ್ಲಿರುವ ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಸಂಡೂರು ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆಯನ್ನು ಬಳ್ಳಾರಿ ಜಿಲ್ಲೆಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ವಿದ್ಯುನ್ಮಾನ ಮತಯಂತ್ರಗಳನ್ನು ಬಿಗಿ ಬಂದೋಬಸ್ತ್‌ ನಲ್ಲಿ ಸ್ಟ್ರಾಂಗ್ ರೂಮ್‍ಗಳಲ್ಲಿ ಇರಿಸಲಾಗಿದೆ.

ವೆಬ್ ಕ್ಯಾಸ್ಟಿಂಗ್: ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಪ್ರತಿಷ್ಠಿತ ಹಾಗೂ ತೀವ್ರ ಪೈಪೋಟಿಯ ಕಣವಾಗಿ ಮಾರ್ಪಟ್ಟಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎಲ್ಲ 276 ಮತಗಟ್ಟೆಗಳಲ್ಲೂ ಚುನಾವಣಾ ಆಯೋಗವು ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಿತ್ತು. ಇದಲ್ಲದೆ, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ 121, ಸಂಡೂರು ವಿಧಾನಸಭಾ ಕ್ಷೇತ್ರದ 127 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಲಾಗಿತ್ತು.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯು ಸಂಜೆವರೆಗೆ ಶಾಂತಯುತವಾಗಿ ನಡೆಯಿತು. ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾರ್ಗದರ್ಶನದಲ್ಲಿ, ಅಧಿಕಾರಿಗಳು ಮತ್ತು ಸಿಬ್ಬಂದಿಯು ಮತದಾನ ಪ್ರಕ್ರಿಯೆಯ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ 7.30ರ ವೇಳೆಗೆ ಜನರು ಮತಗಟ್ಟೆಗಳಲ್ಲಿ ಸರತಿ ಸಾಲಲ್ಲಿ ನಿಂತಿದ್ದರು. ಮಧ್ಯಾಹ್ನ ವೇಳೆ ಮತದಾನದ ಪ್ರಮಾಣವು ಮಂದಗತಿಯಲ್ಲಿತ್ತು. ಹೊತ್ತಿಳಿಯುತ್ತಿದ್ದಂತೆ ಮತದಾನ ದಾಖಲಾತಿ ಪ್ರಮಾಣ ಬಿರುಸು ಪಡೆಯಿತು. ಪಟ್ಟಣ, ನಗರ ಪ್ರದೇಶದ ಮತದಾರರು ಬೆಳಗ್ಗೆ 10 ಗಂಟೆ ನಂತರ ಮತಗಟ್ಟೆಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನ ಮಾಡುವುದು ಕಂಡು ಬಂದಿತು.

ಸೂಕ್ತ ಭದ್ರತೆ: 241 ಮತಗಟ್ಟೆಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಗತ್ಯಕ್ಕೆ ತಕ್ಕಂತೆ ಪೊಲೀಸ್, ಗೃಹರಕ್ಷಕ ದಳ ಮತ್ತು ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿ ಸೂಕ್ತ ಭದ್ರತೆ ಒದಗಿಸಲಾಗಿತ್ತು. 716ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು. ಕೆಎಸ್‍ಆರ್‍ಪಿ ಮತ್ತು ಡಿಎಆರ್ ತುಕಡಿಗಳಿಂದ ಸೂಕ್ತ ಭದ್ರತೆ ಒದಗಿಸಲಾಗಿತ್ತು.

ಸಂಡೂರು: ಸಂಡೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಮತದಾನ ಬಹುತೇಕ ಶಾಂತಿಯುತವಾಗಿ ಜರುಗಿತು. ಸಂಡೂರು ಪಟ್ಟಣ, ಕುಡತಿನಿ, ತೋರಣಗಲ್ಲು ಮತ್ತು ವಡ್ಡು ಗ್ರಾಮಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದ್ದು ಕಂಡುಬಂದಿತು.

ಗಮನ ಸೆಳೆದ ಸಖಿ ಮತಗಟ್ಟೆ: ಮತದಾರರನ್ನು ಆಕರ್ಷಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ತೋರಣಗಲ್ಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಮತದಾರರು ಸಖಿ ಮತಗಟ್ಟೆಗೆ ಆಗಮಿಸಿ ತಮ್ಮ ಮತ ಚಲಾಯಿದ ಬಳಿಕ ಅಲ್ಲಿಯೇ ಸ್ಥಾಪಿಸಲಾಗಿದ್ದ ಪಿಂಕ್ ಸೆಲ್ಫಿ ಬೂತ್‍ನಲ್ಲಿ ನಿಂತುಕೊಂಡು ಮತಶಾಹಿ ಬೆರಳು ತೋರಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಸಂಭ್ರಮಿಸಿದ್ದು ಕಂಡುಬಂತು.

ಮತದಾರರಿಗೆ ಮತ್ತು ಮತಗಟ್ಟೆ ಸಿಬ್ಬಂದಿಗಳಿಗೆ ಆರೋಗ್ಯ ಸಮಸ್ಯೆ ಕಂಡುಬಂದಲ್ಲಿ ನಿಭಾಯಿಸಲು ಆರೋಗ್ಯ ಇಲಾಖೆಯ ತಂಡದ ಜೊತೆಗೆ ವಿವಿಧ ಅಗತ್ಯದ ಔಷಧಿಗಳ ಮೆಡಿಕಲ್ ಕಿಟ್ ಜೊತೆಗೆ ಆಶಾ, ಅಂಗನವಾಡಿ ಕಾರ್ಯಕರ್ತರನ್ನು ನಿಯೋಜಿಸಲಾಗಿತ್ತು.

ಜಿಲ್ಲಾಡಳಿತದಿಂದ ನೆರಳಿನ ಸೌಲಭ್ಯ ಇಲ್ಲದ ಕಡೆ ಶ್ಯಾಮಿಯಾನ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವಯಸ್ಕರಿಗೆ ಹಾಗೂ ವಿಶೇಷಚೇತನರಿಗೆ ವೀಲ್‍ಚೇರ್ ವ್ಯವಸ್ಥೆ ಮಾಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News