ಸಿದ್ದರಾಮಯ್ಯ ಮುಖವಾಡ ಕಳಚಿದೆ, ರಾಜೀನಾಮೆ ನಿಶ್ಚಿತ : ಬಿ.ವೈ.ವಿಜಯೇಂದ್ರ
ಹುಬ್ಬಳಿ : ವಾಲ್ಮೀಕಿ ಮತ್ತು ಮುಡಾ ಹಗರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದ್ದು, ಭ್ರಷ್ಟಾಚಾರದ ಕಳಂಕ ಮೆತ್ತಿಕೊಂಡಿದೆ. ಇದರ ಪರಿಣಾಮ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಮಾದ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಮುಡಾ ನಿವೇಶನ ಹಂಚಿಕೆ ಹಗರಣ ಕೇವಲ 14 ನಿವೇಶನಕ್ಕೆ ಸೀಮಿತವಾದದ್ದಲ್ಲ. ಇದು 5ಸಾವಿರ ಕೋಟಿ ರೂ.ಗಳಿಗೂ ಮೀರಿದ ಸಾವಿರಾರು ನಿವೇಶನಗಳ ಬಹುದೊಡ್ಡ ಹಗರಣ ಎಂದು ಗುಡುಗಿದರು.
ಸಿಎಂ ತವರು ಜಿಲ್ಲೆಯಲ್ಲಿ ಬಡವರನ್ನು ತಲುಪಬೇಕಿದ್ಧ ಕೋಟ್ಯಂತರ ರೂ.ಬೆಲೆ ಬಾಳುವ ಸಾವಿರಾರು ಮುಡಾ ನಿವೇಶನಗಳು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕಾಂಗ್ರೆಸ್ ನಾಯಕರ ಪಾಲಾಗಿವೆ. ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಿನಲ್ಲಿ ಕಾನೂನು ಬಾಹಿರವಾಗಿ 14 ನಿವೇಶನಗಳನ್ನು ಪಡೆದಿದ್ದಾರೆ. ಆದರೆ, ಇದು 14 ನಿವೇಶನಕ್ಕೆ ಸೀಮಿತವಾದುದಲ್ಲ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಮಾಜಿ ಸಚಿವ ನಾಗೇಂದ್ರ ಮತ್ತು ಶಾಸಕ ಬಸವರಾಜ ದದ್ದಲ್ ಮೇಲೆ ಚಾರ್ಜ್‍ಶೀಟ್ ಹಾಕಿದರೂ ಸಿಎಂ ಮತ್ತು ಡಿಸಿಎಂ ಇವರನ್ನು ರಕ್ಷಿಸಲು ಯತ್ನಿಸಿದರು. ಹಾಗಾಗಿ ವಾಲ್ಮೀಕಿ ಮತ್ತು ಮುಡಾ ಹಗರಣ ಎರಡರಲ್ಲೂ ಎಸ್‌ಐಟಿ ತನಿಖೆಯಿಂದ ನ್ಯಾಯ ನಿರೀಕ್ಷೆ ಅಸಾಧ್ಯವೆಂದು ಹೇಳಿದರು.
ಸಿಬಿಐ ತನಿಖೆಗೆ ವಹಿಸಬೇಕು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಏಕ ವ್ಯಕ್ತಿ ನೇತೃತ್ವದ ತನಿಖಾ ಆಯೋಗ, ವಿಶೇಷ ತನಿಖಾ ತಂಡ (ಎಸ್‌ಐಟಿ)ದಿಂದ ತನಿಖೆ ಸಾಧ್ಯವಿಲ್ಲ. ಹಾಗಾಗಿ ಮುಖ್ಯಮಂತ್ರಿ ಅವರು ಮುಡಾ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೇ ವಹಿಸಬೇಕು’ ಎಂಧು ವಿಜಯೇಂದ್ರ ಆಗ್ರಹಿಸಿದರು.