ʼಜಲ ಜೀವನ್ ಮಿಷನ್ʼ ಯೋಜನೆಯಡಿ ಕಾಮಗಾರಿಗಳಿಗೆ ಸಚಿವ ಸಂಪುಟ ಅನುಮೋದನೆ

Update: 2024-01-18 13:57 GMT

ಬೆಂಗಳೂರು: ದಕ್ಷಿಣ ಕನ್ನಡ, ಮೈಸೂರು ಹಾಗೂ ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆ ಅನುಮೋದನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಉಳ್ಳಾಲ ತಾಲೂಕಿನ 24 ಗ್ರಾಮಗಳಿಗೆ ಕೈರಂಗಳದಲ್ಲಿರುವ ಕೆಯುಡಬ್ಲ್ಯುಎಸ್‍ಡಿಬಿ ನೀರು ಶುದ್ಧೀಕರಣ ಘಟಕದಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು 245 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಮತ್ತು ಇತರೆ 134 ಜನವಸತಿಗಳ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ‘ಡಿಬಿಓಟಿ’ ಆಧಾರದ ಮೇಲೆ ಒಟ್ಟು 101.73 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಈ ಯೋಜನೆಯನ್ನು ʼಜಲ್ ಜೀವನ್ ಮಿಷನ್‍ʼ ನಡಿ ಸಂಯೋಜಿತಗೊಳಿಸಿ ಕೇಂದ್ರ ಸರಕಾರದ ಅನುದಾನ 42.97ಕೋಟಿ ರೂ.ಗಳನ್ನು ವಿನಿಯೋಗಿಸಲು ಅನುಮೋದನೆ ನೀಡಲಾಗಿದೆ.

ಈ ಯೋಜನೆಯ ಅನುಷ್ಠಾನಕ್ಕೆ ಹಾಗೂ 5 ವರ್ಷಗಳ ಯೋಜನೆಯ ಕಾರ್ಯಚರಣೆ ಮತ್ತು ನಿರ್ವಹಣೆಗೆ ರಾಜ್ಯ ಸರಕಾರದ ರೂ.58.76 ಕೋಟಿಗಳ ಅನುದಾನವನ್ನು ವಿನಿಯೋಗಿಸಿಕೊಳ್ಳಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಹಂಪಾಪುರ ಮತ್ತು ಇತರೆ 48 ಜನವಸತಿ ತಾಲೂಕುಗಳಿಗೆ 65.07 ಕೋಟಿ ರೂ.ಗಳಲ್ಲಿ, ದೊಡ್ಡಬಾಗಿಲು ಮತ್ತು ಇತರೆ 24 ಜನವಸತಿ ತಾಲೂಕುಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಒಟ್ಟು 34 ಕೋಟಿ ರೂ.ಗಳಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ನೆಗಳೂರು ಹಾಗೂ ಇತರೆ 3 ಗ್ರಾಮಗಳಿಗೆ 18 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಹಾಗೂ ಹಾನಗಲ್ ತಾಲೂಕಿನ ಕುಡ್ಲ ಮತ್ತು ಇತರೆ 5 ಗ್ರಾಮಗಳಿಗೆ 26 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಪುನಶ್ಚೇತನ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News