ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿ ಮೀಸಲು ಸಂಬಂಧದ ಭಕ್ತವತ್ಸಲ ವರದಿ ಕೈಬಿಡಲು ಸಂಪುಟ ಸಭೆ ನಿರ್ಧಾರ
ಬೆಂಗಳೂರು : ಡಾ.ಜಸ್ಟೀಸ್ ಕೆ.ಭಕ್ತವತ್ಸಲ ಆಯೋಗವು ಮಾಡಿರುವ ಶಿಫಾರಸ್ಸನ್ನು ಕೈಬಿಡುವ, ಕೌನ್ಸಿಲಿಂಗ್ ಮೂಲಕ ಪಿಡಿಒ, ಸಬ್ ರಿಜಿಸ್ಟ್ರಾರ್ ವರ್ಗಾವಣೆ ಹಾಗೂ ಬಿಎಂಟಿಸಿ ಹೊಸ ಬಸ್‍ಗಳ ಖರೀದಿ ಸೇರಿದಂತೆ ವಿವಿಧ ಯೋಜನೆ ಅನುಷ್ಠಾನಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧದ ಡಾ.ಜಸ್ಟೀಸ್ ಕೆ.ಭಕ್ತವತ್ಸಲ ಆಯೋಗವು ಮಾಡಿರುವ ಶಿಫಾರಸ್ಸು ಕೈಬಿಟ್ಟು, ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಚುನಾವಣಾ ಘಟಕಗಳನ್ನು ಆಯಾ ಇಲಾಖೆಗಳ ನಿಯಂತ್ರಣದಲ್ಲಿ ಉಳಿಸಿ, ಪ್ರಸ್ತುತ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಮುಂದುವರೆಸಲು ನಿರ್ಣಯಿಸಲಾಗಿದೆ" ಎಂದು ತಿಳಿಸಿದರು.
ಕೆಜಿಐಡಿ ವಿಮಾ ಯೋಜನೆಯ ಕಡ್ಡಾಯ ವಿಮಾದಾರರಿಗೆ ಬೋನಸ್ ಘೋಷಣೆ ಮಾಡಲು ಪ್ರಸ್ತಾಪಿಸಲಾಗಿದ್ದು, ಅದರಂತೆ 2018ರ ಎ.1.ರಿಂದ 2020ರ ಮಾರ್ಚ್31ರ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲ ಪಾಲಿಸಿಗಳಿಗೆ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ 80 ರೂ. ಅನ್ವಯ ಲಾಭಾಂಶ (ಬೋನಸ್) ಘೋಷಿಸಲಾಗುವುದು.
ಜತೆಗೆ, ಅವಧಿ ಪೂರ್ಣ, ಮರಣ ಜನ್ಯ ಹಾಗೂ ವಿಮಾ ತ್ಯಾಗ ಮೌಲ್ಯಗಳಿಂದ 2020ರ ಎ.ರಿಂದ 2022ರ ಮಾರ್ಚ್ 31ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ 80 ರೂ.ರಂತೆ ಮಧ್ಯಂತರ ಲಾಭಾಂಶವನ್ನು ಘೋಷಿಸಲು ಸಚಿವ ಸಂಪುಟ ನಿರ್ಣಯಿಸಿದೆ ಎಂದು ಹೇಳಿದರು.
5ನೆ ರಾಜ್ಯ ಹಣಕಾಸು ಆಯೋಗದ ಅವಧಿಯನ್ನು 28ನೆ ಫೆಬ್ರವರಿ 2025 ರವರೆಗೆ ವಿಸ್ತರಿಸುವ ಬಗ್ಗೆ ಹಾಗೂ ಡಿಸೆಂಬರ್ 2024ರ ಒಳಗೆ ಆಯೋಗವು ತನ್ನ ವರದಿಯನ್ನು ಸಲ್ಲಿಸಲು ಅನುಮೋದನೆ ನೀಡಲಾಗಿದೆ. 563 ನಮ್ಮ ಕ್ಲಿನಿಕ್‍ಗಳಿಗೆ ಪ್ರಯೋಗಾಲಯ, ಸಾಮಗ್ರಿ ಹಾಗೂ ಔಷಧಿ ಖರೀದಿಗೆ ಒಟ್ಟು 53.66 ಕೋಟಿ ಭರಿಸಲು ಒಪ್ಪಿಗೆ.
ಬಜೆಟ್‍ನಲ್ಲಿ ಘೋಷಣೆ ಅನ್ವಯ 100 ಹಾಸಿಗೆಗಳ 7 ತಾಲೂಕಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 256.15 ಕೋಟಿಗಳ ಅಂದಾಜು ಮೊತ್ತಕ್ಕೆ ಅನುಮೋದನೆ ದೊರೆತಿದೆ ಎಂದು ಅವರು ಹೇಳಿದರು.
15 ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ವಿವಿಧ ವೃಂದದ ಒಟ್ಟು 158 ಹುದ್ದೆಗಳನ್ನು ಸೃಜಿಸಲು ಹೆಚ್ಚುವರಿ 217 ಹುದ್ದೆಗಳನ್ನು ಕಡಿಮೆ ಒತ್ತಡ ಇರುವ ಸ್ಥಳಗಳಿಂದ ಅವಶ್ಯವಿರುವ ಕೇಂದ್ರಗಳಿಗೆ ಸ್ಥಳಾಂತರಿಸಲು ನಿರ್ಣಯಿಸಿದೆ ಎಂದು ಉಲ್ಲೇಖಿಸಿದರು.
ಕೆಎಇ ಕಟ್ಟಡದ ಉನ್ನತೀಕರಣ ಹಾಗೂ ಹೆಚ್ಚುವರಿ ಕಟ್ಟಡದ ನಿರ್ಮಾಣ ಕಾಮಗಾರಿಗಾಗಿ 30 ಕೋಟಿ ಅಂದಾಜು ಮೊತ್ತಕ್ಕೆ ಹಸಿರು ನಿಶಾನೆ ನೀಡಲಾಗಿದೆ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ‘ಕಾನೂನು ಮತ್ತು ನೀತಿ-2023’ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ ಎಂದು ಅವರು ವಿವರಿಸಿದರು.
ಕೆಎಸ್ಸಾರ್ಟಿಸಿ ಸಂಸ್ಥೆಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೇರೂರು ಗ್ರಾಮದಲ್ಲಿ ನೂತನ ಬಸ್ ಘಟಕ ನಿರ್ಮಾಣಕ್ಕಾಗಿ ಉಚಿತವಾಗಿ 5 ಎಕರೆ ಜಮೀನು ಮಂಜೂರು ಮಾಡಲು ಸಚಿವ ಸಂಪುಟ ಅನುಮೋದಿಸಿದೆ. ಕೆಎಎಸ್ ಅಧಿಕಾರಿಗಳ ಸಂಘಕ್ಕೆ ಇನ್ ಫೆಂಟ್ರಿ ರಸ್ತೆಯಲ್ಲಿರುವ ನೀಡಿರುವ ನಿವೇಶನದ ಗುತ್ತಿಗೆ ಅವಧಿಯನ್ನು 2023ರ ಜುಲೈ 30 ಪೂರ್ವಾನ್ವಯವಾಗುವಂತೆ 30 ವರ್ಷಗಳ ಅವಧಿಗೆ ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ.10 ರಷ್ಟು ಹೆಚ್ಚಿಸುವ ಷರತ್ತಿಗೊಳಪಟ್ಟು ಮುಂದುವರೆಸಲು ಹಾಗೂ ವಾರ್ಷಿಕ 10 ಸಾವಿರ ಗಳಂತೆ ಗುತ್ತಿಗೆ ಬಾಡಿಗೆಯನ್ನು ಹೆಚ್ಚಿಸಲು ಸಚಿವ ಸಂಪುಟ ಒಪ್ಪಿದೆ ನೀಡಿದೆ ಎಂದು ಹೇಳಿದರು.
ಪರಿಹಾರ: ಇತ್ತೀಚಿಗೆ ಬಿಬಿಎಂಪಿಯಲ್ಲಿ ಸಂಭವಿಸಿದ ಅಗ್ನಿ ಅವಗಡದಲ್ಲಿ ಮೃತರಾದ ಅಧೀಕ್ಷಕ ಅಭಿಯಂತರ ಸಿ.ಎಂಶಿವಕುಮಾರ್, ಹಾಗೂ ಪ್ರಭಾರ ಮುಖ್ಯ ಅಭಿಯಂತರಿಗೆ 50 ಲಕ್ಷಗಳ ಪರಿಹಾರ ಹಾಗೂ ಅವಲಂಬಿತರಿಗೆ ಸರಕಾರಿ ಉದ್ಯೋಗ ಮತ್ತು ತೀವ್ರ ಗಾಯಗೊಂಡ ಉಳಿದವರಿಗೆ ಪರಿಹಾರ ಧನ ನೀಡಲು ಸಚಿವ ಸಂಪುಟ ಅನುಮೋದಿಸಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಕೌನ್ಸಲಿಂಗ್ ಮೂಲಕ ವರ್ಗಾವಣೆ :ಪಿಡಿಒ, ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್-1), (ಗ್ರೇಡ್-2), ಸಹಾಯಕರ ವರ್ಗಾವಣೆ ಸಂಬಂಧ ಕೌನ್ಸಲಿಂಗ್ ಮೂಲಕ ವರ್ಗಾವಣೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಹೊಸ ಬಸ್ಸುಗಳ ಖರೀದಿ: ರಾಜ್ಯ ಸರಕಾರ ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) ಬಸ್ ಖರೀದಿಗೆ ಹಸಿರು ನಿಶಾನೆ ತೋರಿಸಿದ್ದು, ಹೊಸದಾಗಿ 840 ಬಸ್‍ಗಳು ಶೀಘ್ರದಲ್ಲಿಯೇ ರಸ್ತೆಗೆ ಇಳಿಯಲಿವೆ. ಗುರುವಾರ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಒಟ್ಟಾರೆ ಬಸ್‍ಗಳ ಖರೀದಿಗೆಂದು 355ಕೋಟಿ ರೂ.ಹಣವನ್ನು ನೀಡಲು ಒಪ್ಪಿಗೆ ಸೂಚಿಸಲಾಗಿದೆ. ಪ್ರತಿ ಒಂದು ಬಸ್‍ಗೆ 43.3 ಲಕ್ಷ ರೂಪಾಯಿ ವೆಚ್ಚವಾಗಲಿದೆ.
ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಬೆಂಬಲಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಗ್ರಾಮದಲ್ಲಿ 0.14 ಎಕರೆ (14 ಸೆಂಟ್) ಜಮೀನನ್ನು ಮಂಜೂರು ಮಾಡಲು ಸಚಿವ ಸಂಪುಟ ಅನುಮೋದನೆ ನೀಡಿದೆ.