ಕೋಲಾರ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಆಯ್ಕೆ ಕಲಹ | ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸಿದರೆ ಗೆಲುವು ಕಷ್ಟ ಸಾಧ್ಯ ಎಂದ ಕೆ.ಎಚ್.ಮುನಿಯಪ್ಪ

Update: 2024-03-29 11:40 GMT

ಬೆಂಗಳೂರು: ‘ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಫಲಿತಾಂಶ ಕಾಂಗ್ರೆಸ್ ಪರ ಇರುವುದಿಲ್ಲ. ಹೀಗಾಗಿ ಎರಡೂ ಬಣಗಳ ಒಂದಾದರೆ ಮಾತ್ರ ಗೆಲ್ಲಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕೋಲಾರ ಕ್ಷೇತ್ರದಲ್ಲಿ ನನಗೆ ಮೂವತ್ತು ವರ್ಷಗಳಿಂದಲೂ ಇದ್ದೇನೆ. ರಾಜಕೀಯ ಅನುಭವವಿದೆ. ನಾನು ಆ ಕ್ಷೇತ್ರದಲ್ಲಿ ಸೋಲು ಕಂಡಿದ್ದೇನೆ. ಆ ಕ್ಷೇತ್ರವನ್ನು ಗೆಲ್ಲಬೇಕಿದೆ ಎಂಬ ಕಾರಣಕ್ಕಾಗಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದೇನೆ ಎಂದು ಅವರು ವಿವರಣೆ ನೀಡಿದರು.

ತಾವು ಹೇಳಿದ ಅಭ್ಯರ್ಥಿಗೆ ಕೋಲಾರದಲ್ಲಿ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುತ್ತೇನೆಂದು ಭರವಸೆ ನೀಡಿದ್ದೇನೆ. ಆ ಕ್ಷೇತ್ರದಲ್ಲಿ 7 ಬಾರಿ ನಾನು ಗೆಲುವು ಕಂಡಿದ್ದು, ನಾನು ಕಾಂಗ್ರೆಸ್ ಪಕ್ಷದ ಕಾರ್ಯಕಾರಿ ಸಮಿತಿ ಸೇರಿದಂತೆ ವಿವಿಧ ಹಂತಗಳಲ್ಲಿ ಕೆಲಸ ಮಾಡಿದ್ದೇನೆ. ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಿದ್ದೇನೆ ಎಂದರು.

ಕ್ಷೇತ್ರದಲ್ಲಿ ಇದೀಗ ಪರ್ಯಾಯ ಅಭ್ಯರ್ಥಿ ಹುಡುಕುತ್ತಿರುವುದು ಸರಿಯಲ್ಲ. ಅದು ಗೆಲುವಿಗೆ ಸಹಕಾರಿಯಲ್ಲ. ಈಗಲೂ ಕಾಲ ಮಿಂಚಿಲ್ಲ. ನಮ್ಮನ್ನೆಲ್ಲಾ ಒಂದು ಮಾಡಿ, ನಾನು ಹೇಳಿದ ಅಭ್ಯರ್ಥಿಗೆ ಟಿಕೆಟ್ ನೀಡಿ. ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಗೆಲ್ಲಿಸಿಕೊಂಡು ಬರುತ್ತೇವೆಂದು ಈ ಹಿಂದೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾವು ಭರವಸೆ ನೀಡಿದ್ದೆವು ಎಂದು ಅವರು ತಿಳಿಸಿದರು.

ನಾನು ಮತ್ತು ಕೆ.ಆರ್.ರಮೇಶ್‍ಕುಮಾರ್ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಗೆಲುವು ಸಾಧ್ಯ. ಆದರೆ, ಇದೀಗ ಪರ್ಯಾಯ ಅಭ್ಯರ್ಥಿಯನ್ನು ಹುಡುಕಾಟ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ನಮ್ಮನ್ನು ಒಂದು ಮಾಡಿ, ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಿಲ್ಲವೇ? ಎರಡೂ ಬಣದವರು ಒಪ್ಪುವುದಿಲ್ಲ. ಸೋಲಲಿ, ಗೆಲ್ಲಲಿ ಎಂದು ಬೇರೆ ಅಭ್ಯರ್ಥಿಯನ್ನು ಕೊಟ್ಟು ಕೈತೊಳೆದುಕೊಳ್ಳುವುದು ಸರಿಯಲ್ಲ. ಸಿಎಂ, ಡಿಸಿಎಂ ಒಗ್ಗಟ್ಟು ಮೂಡಿಸಲು ಕೆಲಸ ಮಾಡಬೇಕೆಂದು ಅವರು ಸಲಹೆ ನೀಡಿದರು.

ನಾನು ಚುನಾವಣೆಯಲ್ಲಿ ಸೋತರೂ ಜಿಲ್ಲೆಯಲ್ಲಿ ಎಲ್ಲರೂ ಒಟ್ಟಾಗಬೇಕು, ನಮ್ಮ ಸ್ವಪ್ರತಿಷ್ಠೆಯಿಂದ ಕಾಂಗ್ರೆಸ್ ಪಕ್ಷದ ಹಾಳಾಗಬಾರದು ಎಂಬ ಕಾರಣಕ್ಕೆ ಅವರಿಗೆ ವಿರೋಧ ವ್ಯಕ್ತಪಡಿಸಲಿಲ್ಲ. ನನಗೆ ಗೊತ್ತಿಲ್ಲದಂತೆ ನನ್ನನ್ನು ಸೋಲಿಸಿದವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡರು. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿದರು, ಸಚಿವರನ್ನಾಗಿಯೂ ಮಾಡಿದರು. ನಾನು ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ. ಪಕ್ಷದ ದೂರದೃಷ್ಟಿಯಿಂದಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕೇವಲ ಮಾದಿಗ(ಎಡಗೈ), ಹೊಲೆಯ (ಬಲಗೈ) ಮತಗಳಿಂದಷ್ಟೆ ಸೀಮಿತವಾಗಿ ನಾನು ಸಂಸದನಾಗಿ ರಾಷ್ಟ್ರ ರಾಜಕಾರಣ ಮಾಡಲಿಲ್ಲ. ಎಲ್ಲ ಸಮುದಾಯದವರೂ ಬೆಂಬಲಿಸಿದ್ದಾರೆ. ಪಕ್ಷ ಯಾವುದೇ ಸಮುದಾಯಕ್ಕೆ ಅವಕಾಶ ಕಲ್ಪಿಸಿದರೂ ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಜಾತಿ ರಾಜಕಾರಣ ಮಾಡಿಕೊಂಡು ಕೂರಲು ಸಾಧ್ಯವಿಲ್ಲ. ಕಾಂಗ್ರೆಸ್ ಗೆಲ್ಲುವುದು ಮುಖ್ಯ ಎಂದು ಅವರು ತಿಳಿಸಿದರು.

‘ನಾನು ಯಾರ ವಿರುದ್ಧವೂ ಹೆಗೆ ಸಾಧಿಸುವುದಿಲ್ಲ. ಹಲವು ಶಾಸಕರನ್ನು ತಯಾರು ಮಾಡಿದ್ದೇನೆ. ಗ್ರಾಮ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕೆಲಸ ಮಾಡಿದ್ದೇನೆ. ಒಂದು ಹಂತದಲ್ಲಿ ರಮೇಶ್‍ಕುಮಾರ್ ಜೊತೆ ಚರ್ಚಿಸಲು ನಾನು ಅವರ ಮನೆ ಬಳಿ ಹೋಗಿದ್ದೆ. ಆದರೆ ಅವರು ಸಿಗಲಿಲ್ಲ. ನಮ್ಮ ವೈಯಕ್ತಿಕ ಪ್ರತಿಷ್ಠೆಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಬಾರದು ಎಂಬುದು ನನ್ನ ಸ್ಪಷ್ಟ ಅಭಿಪ್ರಾಯ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News