ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಗಳು ರದ್ದಾದ ತಮ್ಮ ವಿರುದ್ಧದ ಪ್ರಕರಣಗಳ ಮಾಹಿತಿಯನ್ನೂ ಒದಗಿಸಬೇಕು: ಹೈಕೋರ್ಟ್
ಬೆಂಗಳೂರು: ಚುನಾವಣೆಗೆ ನಾಮಪತ್ರದೊಂದಿಗೆ ಪ್ರಮಾಣಪತ್ರ ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಅಭ್ಯರ್ಥಿಯ ವಿರುದ್ಧದ ಕ್ರಿಮಿನಲ್ ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಲ್ಲಿ, ಅಂತಹ ರದ್ದಾದ ಪ್ರಕರಣಗಳ ಮಾಹಿತಿ ಒದಗಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.
ಪ್ರಕರಣದಲ್ಲಿ ಖುಲಾಸೆಗೊಂಡಿದ್ದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ತಮ್ಮ ಸದಸ್ಯತ್ವ ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ಬಾಗಲಕೋಟೆ ಜಿಲ್ಲೆಯ ಬೇವೂರು ಗ್ರಾಮ ಪಂಚಾಯತ್ ಸದಸ್ಯ ಮುದಿಯಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಧಾರವಾಡದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಮಾಡಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಅಭ್ಯರ್ಥಿಗಳು ಬಾಕಿ ಇರುವ ಕ್ರಿಮಿನಲ್ ಕೇಸುಗಳ ವಿವರ ಸಲ್ಲಿಸಿದರೆ ಸಾಲದು. ಅದರ ಜತೆ ಖುಲಾಸೆ ಅಥವಾ ರದ್ದಾದ ಪ್ರಕರಣಗಳ ಮಾಹಿತಿ ನೀಡಬೇಕು. ಆಗ ಮತದಾರರು ಯಾವ ಅಭ್ಯರ್ಥಿ ಚುನಾವಣಾ ಕಣದಲ್ಲಿದ್ದಾರೆ. ಅವರ ಹಿನ್ನೆಲೆ ಏನು ಎಂಬುದನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ಮತದಾರರಿಗೆ ಸಂಪೂರ್ಣ ಮಾಹಿತಿ ನೀಡದೆ ಹೋದರೆ ಚುನಾವಣೆಯ ಪರಿಕಲ್ಪನೆಗೆ ವಸ್ತುಶಃ ಘಾಸಿಯಾಗುತ್ತದೆ. ಅದನ್ನು ಸಂಕುಚಿತ ಮನೋಭಾವದಿಂದ ನೋಡಬಾರದು. ಪ್ರತಿಯೊಬ್ಬ ಅಭ್ಯರ್ಥಿಯ ಸಮಗ್ರ ಮಾಹಿತಿ ಮತದಾರನಿಗೆ ದೊರೆತಾಗ ಮಾತ್ರ ಆತ ಎಲ್ಲ ಅಭ್ಯರ್ಥಿಗಳನ್ನು ಆಳೆದು ತೂಗಿ ತನ್ನ ನಿರ್ಧಾರವನ್ನು ಕೈಗೊಳ್ಳಲು ಸಾಧ್ಯ. ಕೆಲವು ಮಾಹಿತಿಯನ್ನು ಅಭ್ಯರ್ಥಿಗಳು ಮುಚ್ಟಿಟ್ಟರೆ ಅದು ಮಾಹಿತಿ ಮರೆಮಾಚಿದಂತಾಗುತ್ತದೆ.
ಹೀಗಾಗಿ, ಅಭ್ಯರ್ಥಿಗಳು ಖುಲಾಸೆಯಾದ ವಿವರಗಳನ್ನು ನೀಡಬೇಕು. ಆನಂತರ ಮತದಾರರು ಯಾವುದು ಸತ್ಯ ಎಂಬುದನ್ನು ತೀರ್ಮಾನಿಸುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ. ಖುಲಾಸೆಗೊಂಡಿರುವ ಪ್ರಕರಣದ ವಿವರ ನೀಡದ್ದಕ್ಕಾಗಿ ತಮ್ಮ ಆಯ್ಕೆ ಅನರ್ಹಗೊಳಿಸಿರುವುದು ಕಾನೂನು ಬಾಹಿರವೆಂಬ ಅರ್ಜಿದಾರರ ವಾದವನ್ನು ನ್ಯಾಯಪೀಠ ಇದೇ ವೇಳೆ ತಳ್ಳಿಹಾಕಿದೆ.